ಬಲೆ ಸೇರದ ಬಂಗುಡೆ, ಬೂತಾಯಿ

ಭರತ್‌ರಾಜ್ ಸೊರಕೆ ಮಂಗಳೂರು

ಹೇರಳವಾಗಿದ್ದ ಮತ್ಸೃ ಸಂಪತ್ತು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಮೀನುಗಾರರಿಗೆ ಬಹುಆದಾಯ ತಂದುಕೊಡುತ್ತಿದ್ದ ಬಂಗುಡೆ, ಬೂತಾಯಿ ಮೀನು ಏಕಾಏಕಿ ಈ ವರ್ಷ ಅಪರೂಪವೆನಿಸಿದೆ.

ಬೂತಾಯಿ (ಬೈಗೆ, ಸಾರ್ಡಿನ್) ಮೀನು ಕಡಿಮೆಯಾಗಿರುವುದು ಕರಾವಳಿ ಮತ್ಸೊೃೀದ್ಯಮಕ್ಕೆ ದೊಡ್ಡ ಹೊಡೆತ ಎಂದೇ ಮೀನುಗಾರರು ವಿಶ್ಲೇಷಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಬೂತಾಯಿ ಮೀನು ಸಮುದ್ರದಲ್ಲಿ ಅಪರೂಪವಾಗಿತ್ತು. ಬಳಿಕ ನಿಧಾನವಾಗಿ ಹೆಚ್ಚಳಗೊಂಡು ಬಲೆ ಸೇರತೊಡಗಿತ್ತು. ಈ ಬಾರಿ ಪರಿಸ್ಥಿತಿ ಪುನರಾವರ್ತಿತವಾಗಿದೆ.

ಮೀನು ಕಡಿಮೆಯಾದ ಪರಿಣಾಮ ಮಾರುಕಟ್ಟೆಯಲ್ಲಿ 60ರಿಂದ 90 ರೂ.ಇದ್ದ ಬೂತಾಯಿ ದರ ಈ ವರ್ಷ 160 ರೂ.ವರೆಗೆ ಏರಿಕೆ ಕಂಡಿತ್ತು. ಬಂಗುಡೆಯ ದರ ಸುಮಾರು 100 ರೂ. ಇದ್ದದ್ದು, 200 ರೂ.ವರೆಗೂ ಏರಿಕೆ ಕಂಡಿದೆ. ಒಳ್ಳೆಯ ಗಾಳಿ, ಜೀವನಕ್ಕೆ ಪೂರಕ ಜಲವಿದ್ದರೆ ಮಾತ್ರ ಮೀನುಗಳು ಇರುತ್ತವೆ, ಇಲ್ಲದಿದ್ದರೆ ವಲಸೆ ಹೋಗುತ್ತವೆ. ನೀರು ಕಲುಷಿತಗೊಂಡಿರುವುದರಿಂದ ಮೀನುಗಳು ಪಥ ಬದಲಾಯಿಸಿ ವಲಸೆ ಹೋಗಿರಬಹುದು. ಕರಾವಳಿ ಮೀನುಗಾರರ ಮುಖ್ಯ ಆದಾಯದ ಬೂತಾಯಿ ಕಣ್ಮರೆಯಾದರೆ ಇಲ್ಲಿನ ಮತ್ಸೊೃೀದ್ಯಮಕ್ಕೆ ದೊಡ್ಡ ಹೊಡೆತ ಎನ್ನುವುದು ಕರಾವಳಿಯ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರ ಅಭಿಪ್ರಾಯ.

ವರ್ಷದಿಂದ ವರ್ಷ ಕುಸಿತ: ಮೀನುಗಾರಿಕೆ ಇಲಾಖೆಯ ಲೆಕ್ಕಚಾರದ ಪ್ರಕಾರ 2014- 15ರಲ್ಲಿ 26,034 ಸಾವಿರ ಟನ್ ಬೂತಾಯಿ ಮೀನು ಹಿಡಿಯಲಾಗಿದೆ. ಆದರೆ 2015-16ರಲ್ಲಿ ಕುಂಠಿತಗೊಂಡು 10,644 ಸಾವಿರ ಟನ್ ಮೀನುಗಾರರ ಬಲೆಗೆ ಬಿದ್ದಿತ್ತು. ಮತ್ತೊಂದೆಡೆ ಬಂಗುಡೆ ಮೀನು 2014-15ರಲ್ಲಿ 22,619 ಸಾವಿರ ಟನ್ ಸಿಕ್ಕರೆ, 2015-16ರಲ್ಲಿ 20, 239 ಸಾವಿರ ಟನ್ ಮೀನು ಲಭ್ಯವಾಗಿತ್ತು. ಕರಾವಳಿಯ ಬಂದರುಗಳಲ್ಲಿ ಸಿಗುತ್ತಿದ್ದ ಬೂತಾಯಿ ಹಾಗೂ ಬಂಗುಡೆ ಮೀನುಗಳೇ ಇಲ್ಲಿನ ಮೀನುಗಾರರ ಪ್ರಮುಖ ಆದಾಯ. ಹಿಂದೆ ಹೇರಳವಾಗಿ ಮೀನು ಸಿಗುತ್ತಿದ್ದ ಪರಿಣಾಮ ಮೀನುಗಾರರ ಜೀವನಾಧಾರಕ್ಕೆ ಅನುಕೂಲವಾಗಿತ್ತು. ಪ್ರಸ್ತುತ ಡೀಸೆಲ್, ಕೂಲಿ ಕಾರ್ಮಿಕರ ಮಜೂರಿಯಲ್ಲೂ ಹೆಚ್ಚಳವಾಗಿದೆ. ಮತ್ಸೊೃೀದ್ಯಮವನ್ನೇ ನೆಚ್ಚಿಕೊಂಡವರಿಗಿದು ದೊಡ್ಡ ಹೊಡೆತ.

ಆಮದಿನಲ್ಲೂ ಕುಸಿತ: ಕರಾವಳಿಯ ಬಂದರುಗಳಲ್ಲಿ ಮತ್ಸೃ ಕೊರತೆಯಾದರೆ ಓಮನ್ ದೇಶದಿಂದ ಮತ್ತು ಸ್ಥಳೀಯವಾಗಿ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ಮೀನು ಆಮದಾಗುತ್ತಿತ್ತು. ಅಲ್ಲಿಂದ ಆಮದಾಗುತ್ತಿದ್ದ ದೊಡ್ಡ ಗಾತ್ರದ ಮೀನುಗಳಿಗೆ ಕೆ.ಜಿ.ಗೆ 130ರಿಂದ 140 ರೂ.ವರೆಗೆ ದರ ಇರುತ್ತಿತ್ತು. ಆದರೆ ಈ ವರ್ಷ ಮೀನು ಆಮದಾಗಿಲ್ಲ. ಚೆನ್ನೈ, ಆಂಧ್ರದಲ್ಲೂ ಕರಾವಳಿ ಬಂದರಿನ ಪರಿಸ್ಥಿತಿಯೇ ಮುಂದುವರಿದಿದೆ.

ಕಡಲಿನಲ್ಲೇ ವ್ಯಾಪಾರ: ಸಾಕಷ್ಟು ಮೀನು ಲಭ್ಯವಾಗದಿರುವ ಪರಿಣಾಮ ಮಧ್ಯವರ್ತಿಗಳು ಬೋಟ್‌ಗಳು ದಡಕ್ಕೆ ಬರುವ ಮೊದಲೇ ಕಡಲಿನಲ್ಲೇ ಮೀನುಗಳ ಲಭ್ಯತೆ ಕೇಳಿ ಖರೀದಿಸುತ್ತಿದ್ದಾರೆ. ಹೀಗೆ ಖರೀದಿಸಿದ ಮೀನುಗಳು ನೇರವಾಗಿ ವಿದೇಶಕ್ಕೆ, ಹೊರರಾಜ್ಯಕ್ಕೆ ರಫ್ತಾಗುತ್ತಿವೆ. ಹೀಗಾಗಿ ಸ್ಥಳೀಯರಿಗೆ ಮೀನು ಸಿಗುತ್ತಿಲ್ಲ. ಲೈಟ್ ಫಿಶಿಂಗ್ ಸ್ಥಗಿತಗೊಳಿಸಿರುವುದೂ ಉದ್ಯಮಕ್ಕೆ ಪೆಟ್ಟು. ಸಣ್ಣ ದೋಣಿಗಳಲ್ಲಿ ಹಿಡಿದ ಮೀನು ಮಾತ್ರ ಬಂದರಿಗೆ ಬಂದು ಸ್ಥಳೀಯವಾಗಿ ಪೂರೈಕೆಯಾಗುತ್ತಿದೆ ಎನ್ನುತ್ತಾರೆ ಮೀನುಗಾರ ರತ್ನಾಕರ್.

ಆಸರೆಯಾದ ಕ್ಲಾತಿ ಮೀನು: ಮತ್ಸೃ ಕ್ಷಾಮದಲ್ಲೂ ಮೀನುಗಾರರಿಗೆ ಆಸರೆಯಾಗಿರುವುದು ಕ್ಲಾತಿ ಅಥವಾ ಕಾರ್ಗಿಲ್ ಎಂದು ಕರೆಯಲ್ಪಡುವ ಗೊಬ್ಬರ ಮತ್ತು ಪ್ರಾಣಿಗಳ ಆಹಾರಕ್ಕೆ ಬಳಸಲ್ಪಡುವ ವಾಸನೆಯುಕ್ತ ಮೀನು. ಕಪ್ಪು, ಕಂದು ಬಣ್ಣದ ಸಣ್ಣ ಗಾತ್ರದ ಈ ಮೀನು ಟನ್‌ಗಟ್ಟಲೆ ಸಿಗುತ್ತಿದೆ. ಮಂಗಳೂರು ಮೀನುಗಾರಿಕಾ ದಕ್ಕೆಯಲ್ಲಿ ಬೋಟ್‌ನಿಂದ ನೇರವಾಗಿ ಲಾರಿಗೆ ಇಳಿಸಿ ಫಿಶ್‌ಮಿಲ್‌ಗೆ ರವಾನೆಯಾಗುತ್ತಿದೆ. ಕೇರಳದಿಂದ ಗುಜರಾತ್ ತನಕವೂ ಕ್ಲಾತಿ ಮೀನುಗಾರಿಕೆ ನಡೆಯುತ್ತಿದೆ. ಪ್ರತಿ ಬೋಟ್‌ಗೆ 20ರಿಂದ 30 ಟನ್ ಈ ಮೀನು ಲಭ್ಯವಾಗುತ್ತಿದೆ. 9ರಿಂದ 10 ರೂ.ವರೆಗೆ ಫಿಶ್‌ಮಿಲ್‌ಗಳಲ್ಲಿ ಈ ಮೀನು ಖರೀದಿಯಾಗುತ್ತಿದೆ ಎನ್ನುತ್ತಾರೆ ಮತ್ಸೃ ಉದ್ಯಮಿಯೋರ್ವರು.

ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷದಲ್ಲಿ ಮೀನು ಲಭ್ಯತೆ ಬಹಳಷ್ಟು ಕಡಿಮೆ. ಹೇರಳವಾಗಿದ್ದ ಬೂತಾಯಿ ಮೀನು ಅಪರೂಪ ಎನಿಸಿದೆ. ನಿರ್ದಿಷ್ಟವಾದ ಕಾರಣಗಳು ತಿಳಿಯುವುದಿಲ್ಲ. ಕ್ಲಾತಿ ಮೀನು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದೆ. ಮತ್ಸೃ ಕ್ಷಾಮದಿಂದ ಮೀನುಗಾರರಿಗೆ ಬಹಳಷ್ಟು ನಷ್ಟ.
|ಮೋಹನ್ ಬೇಂಗ್ರೆ, ಮತ್ಸೊೃೀದ್ಯಮಿ