More

    ಮೀನುಮರಿ ಬಿತ್ತನೆಗೆ ಜಿಲ್ಲೆಯ 119 ಕೆರೆ ಆಯ್ಕೆ

    40.63 ಲಕ್ಷ ಮೀನುಮರಿ ದಾಸ್ತಾನು *501 ಮೆಟ್ರಿಕ್ ಟನ್ ಉತ್ಪಾದನೆ


    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಜಿಲ್ಲೆಯಲ್ಲಿ ಮೀನುಕೃಷಿ ಅಭಿವೃದ್ಧಿಗೆ ಪಣತೊಟ್ಟಿರುವ ಗ್ರಾಮಾಂತರ ಜಿಲ್ಲಾ ಮೀನುಗಾರಿಕೆ ಇಲಾಖೆ ಪ್ರಸಕ್ತ ಸಾಲಿನಲ್ಲಿ ಮೀನುಮರಿ ಬಿತ್ತನೆಗೆ ಸಜ್ಜಾಗಿದ್ದು, ಇದಕ್ಕಾಗಿ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ 119 ಕೆರೆಗಳನ್ನು ಆಯ್ಕೆ ಮಾಡಿದೆ.
    ಆಯ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳಲ್ಲಿ ಪ್ರತಿ ಕೆರೆಯ ಜಲವಿಸ್ತೀರ್ಣಕ್ಕೆ ಅನುಗುಣವಾಗಿ ಮೀನುಮರಿಗಳನ್ನು ಉಚಿತವಾಗಿ ಬಿತ್ತನೆ ಮಾಡಿ ಮೀನು ಕೃಷಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ‘ ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಮೀನುಮರಿ ಬಿತ್ತನೆ’ ಯೋಜನೆಯಡಿ ಕಾರ್ಯಪ್ರವೃತ್ತವಾಗಿದೆ.
    ಪ್ರಸಕ್ತ ಸಾಲಿನಲ್ಲಿ ಗ್ರಾಮಪಂಚಾಯಿತಿಗಳಿಗೆ ಉತ್ತಮ ಆದಾಯ ತರುವ ಉದ್ದೇಶದಿಂದ ಹಾಗೂ ಗ್ರಾಮ ಪಂಚಾಯಿತಿಗಳನ್ನು ಬಳಪಡಿಸುವ ದೃಷ್ಟಿಯಿಂದ ಬಲಿತ ಮೀನುಮರಿಗಳನ್ನು ಉಚಿತವಾಗಿ ದಾಸ್ತಾನು ಮಾಡಿ ಈ ಯೋಜನೆ ಜಾರಿಗೆ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಆಯ್ದ ಪಂಚಾಯಿತಿ ವ್ಯಾಪ್ತಿಯಲ್ಲಿ 119 ಕೆರೆಗಳನ್ನು ಗುರುತಿಸಲಾಗಿದ್ದು, ಆಯಾ ಕೆರೆಗಳ ಜಲವಿಸ್ತೀರ್ಣಕ್ಕೆ ಅನುಗುಣವಾಗಿ 10 ಸಾವಿರ ರೂ. ಮೌಲ್ಯದ ಬಲಿತ ಮೀನುಮರಿಗಳ ಬಿತ್ತನೆಗೆ ಯೋಜನೆ ರೂಪಿಸಲಾಗಿದೆ.
    ಕೆರೆಗಳ ಆಯ್ಕೆ ಮುಖ್ಯ: ಈ ಯೋಜನೆ ಸಾಕಾರಕ್ಕೆ ಮುಖ್ಯವಾಗಿ ಕೆರೆಗಳ ವಸ್ತುಸ್ಥಿತಿ ಪರಿಶೀಲಿಸಲಾಗುವುದು, ಯೋಜನೆ ಲಪ್ರದವಾಗಲು ಪ್ರಮುಖವಾಗಿ ಆಯಾ ಕೆರೆಯಲ್ಲಿನ ಜಲಸಂಗ್ರಹ ಮಾನದಂಡ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯಡಿ ಮೀನುಮರಿಗಳ ದಾಸ್ತಾನಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪೂರ್ಣಕಾಲಿಕ ಹಾಗೂ ಅರೆಕಾಲಿಕ ಕೆರೆಗಳನ್ನು ಆಯ್ಕೆ ಮಾಡಲಾಗುತ್ತದೆ. ಇಂಥ ಕೆರೆ ಕನಿಷ್ಟ 5ರಿಂದ 6 ಅಡಿ ಆಳ ಹೊಂದಿರಬೇಕು, ವಿಸ್ತೀರ್ಣದ ಶೇ.50 ಭಾಗವನ್ನು ಉಪಯುಕ್ತ ಜಲವಿಸ್ತೀರ್ಣ ಎಂದು ಪರಿಗಣಿಸಲಾಗುವುದು.
    ಜಿಲ್ಲಾ ಮಟ್ಟದ ಸಮಿತಿಯಿಂದ ಆಯ್ಕೆ: ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಆಯಾ ತಾಲೂಕುಗಳ ಪಂಚಾಯಿತಿ ನಿರ್ವಹಣಾಧಿಕಾರಿಗಳು ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಜಿಲ್ಲಾಮಟ್ಟದ ಮೀನುಗಾರಿಕೆ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಇದರಲ್ಲಿ ಮುಖ್ಯವಾಗಿ ಗ್ರಾಮ ಪಂಚಾಯಿತಿಯಿಂದ ವಿಲೇವಾರಿಯಾಗದೆ ಇರುವ ಕೆರೆಗಳನ್ನು ಆಯ್ಕೆ ಮಾಡಲು ಆದ್ಯತೆ ನೀಡಲಾಗುವುದು, ನಂತರದಲ್ಲಿ ಎರಡನೇ ಆದ್ಯತೆಯಾಗಿ ವಿಲೇವಾರಿಯಾಗಿರುವ ಕೆರೆಗಳಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಶೇ50:50 ಅನುಪಾತದಲ್ಲಿ ದಾಸ್ತಾನು: ಕಟ್ಲಾ ಹಾಗೂ ಸಾಮಾನ್ಯಗೆಂಡೆ ಜಾತಿಯ ಮೀನುಮರಿಗಳನ್ನು ಶೇ.50:50 ಅನುಪಾತದಲ್ಲಿ ದಾಸ್ತಾನು ಮಾಡಲಾಗುವುದು, ಕೆರೆಯ ಉಪಯುಕ್ತ ಜಲವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಹೆಕ್ಟೇರ್ ಉಪಯುಕ್ತ ಜಲವಿಸ್ತೀರ್ಣಕ್ಕೆ 4 ಸಾವಿರ ಬಲಿತ ಬಿತ್ತನೆ ಮೀನುಮರಿಗಳಂತೆ 10 ಸಾವಿರ ಮೌಲ್ಯದ ಮೀನುಮರಿಗಳನ್ನು ಕೆರೆಗಳಲ್ಲಿ ಬಿತ್ತನೆ ಮಾಡಲು ಅವಕಾಶವಿದೆ. ದಾಸ್ತಾನು ಮಾಡಿದ 2ರಿಂದ 3ತಿಂಗಳ ನಂತರ ವಿಲೇವಾರಿಯಾಗದೆ ಇರುವ ಕೆರೆಗಳ ಮೀನು ನಿಯಮಾನುಸಾರ ಗ್ರಾಪಂಗಳಿಂದ ವಿಲೇವಾರಿ ಮಾಡಿಸಲಾಗುವುದು.
    10341 ಮೆಟ್ರಿಕ್ ಟನ್: ಜಿಲ್ಲೆಯ ಒಟ್ಟು ಮೀನು ಉತ್ಪಾದನೆ 10341 ಮೆಟ್ರಿಕ್ ಟನ್‌ಗಳಿದ್ದು ಈ ಉತ್ಪಾದನೆಯಲ್ಲಿ 501 ಮೆಟ್ರಿಕ್ ಟನ್ ಈ ಯೋಜನೆಯಿಂದ ಉತ್ಪಾದನೆಯಾಗಲಿದೆ. ಈ ಯೋಜನೆಯಡಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕರೆಗಳನ್ನು ಆಯ್ಕೆ ಮಾಡಿ 40.63 ಲಕ್ಷ ಮೀನುಮರಿಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೀನು ಕೃಷಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ‘ ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಮೀನುಮರಿ ಬಿತ್ತನೆ’ ಯೋಜನೆಯಡಿ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಇದಕ್ಕಾಗಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 119 ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೀನುಗಾರಿಕೆಗೆ ರೈತಾಪಿ ವರ್ಗ ಹೆಚ್ಚು ಆಸಕ್ತಿ ತೋರಿಸುತ್ತಿದ್ದು, ಅವರನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.

    ನಾಗರಾಜ್, ಉಪನಿರ್ದೇಶಕ ಮೀನುಗಾರಿಕೆ ಇಲಾಖೆ ಬೆಂ.ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts