ಲೇಡಿ ಬೀಚ್​ಗೆ ಅಧಿಕಾರಿಗಳ ದೌಡು

ಕಾರವಾರ: ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸಿ ಲೇಡಿ ಬೀಚ್ ಮಲಿನ ಮಾಡುತ್ತಿರುವ ಹೊರ ರಾಜ್ಯದ ಮೀನುಗಾರರ ವಿರುದ್ಧ ಮೀನುಗಾರಿಕೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. ‘ಕರಗುತ್ತಿದೆ ಲೇಡಿ ಬೀಚ್’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಶುಕ್ರವಾರ ವಿಶೇಷ ವರದಿ ಪ್ರಕಟಿಸಿತ್ತು. ಸುಳ್ಳು ದಾಖಲೆ ಹೊಂದಿರುವ ದೋಣಿಗಳ ಮೂಲಕ ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿರುವ ಬಗೆಗೆ ವಿವರಿಸಲಾಗಿತ್ತು.
ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್ ಶುಕ್ರವಾರ ಕರಾವಳಿ ಕಾವಲುಪಡೆ ದೋಣಿಯ ಮೇಲೆ ಲೇಡಿ ಬೀಚ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಔಟ್ ಬೋರ್ಡ್ ಇಂಜಿನ್ ಇರುವ ದೋಣಿಗಳ ದಾಖಲೆ ಪರಿಶೀಲಿಸಿದರು. ಹೊರ ರಾಜ್ಯದ ಮೀನುಗಾರರ ನಾಲ್ಕು ದೋಣಿಗಳ ಲೈಸನ್ಸ್​ನ್ನು ವಶಪಡಿಸಿಕೊಳ್ಳಲಾಗಿದೆ.
ಕಡಲ ತೀರ ಸಂಪೂರ್ಣ ಮಲಿನವಾಗಿರುವುದು ಕಂಡುಬಂದಿದೆ. ಅದು ಯಾರು ಮಾಡಿದ್ದು, ಎಂಬ ಬಗೆಗೆ ದಾಖಲೆ ಕಲೆ ಹಾಕುತ್ತಿದ್ದೇನೆ. ಇನ್ನು ದೋಣಿಗಳ ಪರವಾನಗಿ ಹಾಗೂ ಅವುಗಳಲ್ಲಿರುವ ದೋಣಿಗಳ ಉದ್ದಳತೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಈ ಕುರಿತು ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಮೀನುಗಾರರಿಗೆ ದಂಡ ವಿಧಿಸಲಾಗುವುದು. ಲೈಸನ್ಸ್​ಗಳನ್ನು ರದ್ದು ಮಾಡಿ ಕಠಿಣ ಕ್ರಮ ವಹಿಸಲಾಗುವುದು ಎಂದು ‘ವಿಜಯವಾಣಿ’ಗೆ ತಿಳಿಸಿದ್ದಾರೆ.