More

    ‘ಮೀನುಗಾರಿಕೆಗೆ ವಿಪುಲ ಅವಕಾಶ’

    ಕುಶಾಲನಗರ:

    ಕೊಡಗು ಜಿಲ್ಲೆಯಲ್ಲಿ ಮೀನು ಕೃಷಿಗೆ ವಿಫುಲ ಅವಕಾಶಗಳಿದ್ದು, ಜಿಲ್ಲೆಯ ರೈತರು ಆಧುನಿಕ ತಂತ್ರಜ್ಞಾನದ ಮೂಲಕ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದು ಎಂದು ಹಾರಂಗಿ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಎಸ್. ಸಚಿನ್ ಹೇಳಿದರು. ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಬುಧವಾರ ಹಾರಂಗಿ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಹಾಗೂ ಮೀನು ಮರಿ ಉತ್ಪಾದನೆ, ಪಾಲನಾ ಕೇಂದ್ರಕ್ಕೆ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮೀನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳುವುದರ ಜೊತೆಗೆ ಮುಂದೊಂದು ದಿನ ಭಾರತ ಮೀನು ಕೃಷಿಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರಲಿದೆ. ಜಿಲ್ಲೆಯಲ್ಲಿ ಮೀನುಗಾರಿಕಾ ಇಲಾಖೆಯಡಿ ೯ ಕೆರೆಗಳಿದ್ದು, ಹಾರಂಗಿ, ಹಾಗೂ ಚಿಕ್ಲಿಹೊಳೆ ಎರಡು ಜಲಾಶಯಗಳು ಹಾಗೂ ೯ ನದಿ ಭಾಗದ ಮೀನುಗಾರಿಕಾ ಪ್ರದೇಶಗಳಿವೆ. ಇವುಗಳನ್ನು ಇಲಾಖೆಯಿಂದ ಟೆಂಡರ್ ಮೂಲಕ ನೀಡಲಾಗುತ್ತಿದೆ. ಕೊಡಗಿನಲ್ಲಿ ಪ್ರತಿಯೊಬ್ಬ ಕೃಷಿಕರಲ್ಲೂ ಕೆರಗಳಿದ್ದು, ಇವುಗಳನ್ನು ಮೀನು ಕೃಷಿಗೆ ಬಳಸಿಕೊಂಡಲ್ಲಿ ಅವರ ಆದಾಯವನ್ನು ದ್ವಿಗುಣ ಮಾಡಿಕೊಳ್ಳಬಹುದು. ಮೀನು ಕೃಷಿಗೆ ಅಗತ್ಯವಿರುವ ಮಾಹಿತಿಯ ಜೊತೆಗೆ ಮೀನು ಮರಿಗಳನ್ನು ಸರ್ಕಾರದ ದರದಲ್ಲಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.

    ದಕ್ಷಿಣ ಭಾರತದ ಪ್ರಮುಖ ಮಹಶೀರ್ ಮೀನು ಸಂವರ್ಧನ ಕೇಂದ್ರವಾಗಿ ಇದು ರೂಪುಗೊಂಡಿದ್ದು, ಸುಮಾರು ೭.೫ ಹೆಕ್ಟೇರ್ ಪ್ರದೇಶದ ೮೦ ಕೊಳಗಳಲ್ಲಿ ವಾರ್ಷಿಕವಾಗಿ ಮಹಶೀರ್ ಮಾತ್ರವಲ್ಲದೆ ಇಂಜಿಯನ್ ಮೇಜ್ ಕಾರ್ಪ್ ಎಂದೇ ಕರೆಯಲಾಗುವ ಕಾಟ್ಲ, ರೋಹು, ಸಾಮಾನ್ಯ ಗೆಂಡೆ, ಮೃಗಾಲ್ ಸೇರಿದಂತೆ ವಿವಿಧ ತಳಿಯ ಅಂದಾಜು ೨ ಕೋಟಿ ಮೀನು ಮರಿಗಳನ್ನು ಉತ್ಪಾದಿಸಿ ಆಸಕ್ತ ಮೀನು ಕೃಷಿಕರಿಗೆ ವಿತರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

    ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆ ವಹಿಸಿದ್ದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿ ಸಮಿತಿ ಅಧ್ಯಕ್ಷ ಹರೀಶ್ ಮತ್ತಿತರರು ಇದ್ದರು.

    ಸಂವಾದ ಬಳಿಕ ಹಾರಂಗಿ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ಕೇಂದ್ರದಲ್ಲಿ ಅಳವಿನಂಚಿನಲ್ಲಿರುವ ಮಹಶೀರ್ ಮೀನುಗಳ ನಿರ್ವಹಣೆ, ಮೀನು ಮರಿಗಳ ಉತ್ಪಾದನೆ, ಇತರೆ ಅಲಂಕಾರಿಕಾ ಮೀನುಗಳು ಸೇರಿದಂತೆ ಕೇಂದ್ರದ ಮಾಹಿತಿಯನ್ನು ಅಧಿಕಾರಿ ಸಚಿನ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts