ಕೊನೆಗೂ ಆಗಲಿಲ್ಲ ಮೀನುಗಾರರ ಸಾಲಮನ್ನಾ!

ಉಡುಪಿ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜಿಲ್ಲೆಯ ಮೀನುಗಾರರಿಗೆ ನೀಡಿದ್ದು ಸಿಹಿ, ಕಹಿ ಬಜೆಟ್!
ಮಲ್ಪೆ ಬಂದರಿಗೆ ಅನುದಾನ, ಬೋಟಿಗೆ ಅಳವಡಿಸಲು ಡಿಎಟಿ ಉಪಕರಣಕ್ಕೆ ಶೇ.50 ಸಬ್ಸಿಡಿ ಸಂತಸ ತಂದಿದ್ದರೂ, ಮೀನುಗಾರರ ಸಾಲಮನ್ನಾ ಮಾಡದಿರುವುದು ನಿರಾಶೆ ಉಂಟುಮಾಡಿದೆ.

ಮೀನುಗಾರರಿಗೂ ಕೃಷಿಕರಂತೆ ಎಲ್ಲ ಸೌಲಭ್ಯ ನೀಡುವುದಾಗಿ ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳು ಭರವಸೆ ನೀಡುತ್ತಾರೆ. ಆದರೆ ಕೃಷಿಕರಿಗೆ ನೀಡುವ ಸಾಲಮನ್ನಾ ಯೋಜನೆ ಮಾತ್ರ ನಮಗಿನ್ನೂ ಘೋಷಣೆಯಾಗಿಲ್ಲ. ಇತ್ತೀಚೆಗೆ ಸಿಎಂ ಉಪಸ್ಥಿತಿಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರೈತರ ಜತೆಗೆ ನಮಗೂ ಆಹ್ವಾನವಿತ್ತು. ರೈತರ ಸಾಲಮನ್ನಾ ಮಾಡುವಂತೆ, ಬಡ ಮೀನುಗಾರರ ಸಾಲಮನ್ನಾಕ್ಕೂ ಮನವಿ ಮಾಡಿದ್ದೆವು. ಆದರೆ, ಅವರು ನಮ್ಮ ಮನವಿ ಪುರಸ್ಕರಿಸಿಲ್ಲ ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಬೇಸರ ವ್ಯಕ್ತಪಡಿಸಿದ್ದಾರೆ.

ಬಂದರು ಅಭಿವೃದ್ಧಿಗೆ 15 ಕೋಟಿ: ಮಲ್ಪೆ ಮೀನುಗಾರಿಕೆ ಬಂದರು ಅಭಿವೃದ್ಧಿ ಮತ್ತು ನೈರ್ಮಲ್ಯಕ್ಕೆ 15 ಕೋಟಿ ರೂ.ಅನುದಾನ ಘೋಷಿಸಲಾಗಿದೆ. ಪಡುಕೆರೆಯಲ್ಲಿ 4ನೇ ಹಂತದ ಬಂದರು ನಿರ್ಮಾಣಕ್ಕೆ ವಿರೋಧ ಹಿನ್ನೆಲೆಯಲ್ಲಿ 1 ಮತ್ತು 3 ನೆ ಹಂತದ ಮಧ್ಯೆ ಬಂದರು ಅಭಿವೃದ್ಧಿ ಮಾಡುವಂತೆ ಮಲ್ಪೆ ಮೀನುಗಾರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರ ನಮ್ಮ ಮನವಿ ಪರಿಗಣಿಸಿ 15 ಕೋಟಿ ರೂ. ಅನುದಾನ ನೀಡಿರುವುದನ್ನು ಸ್ವಾಗತಿಸುವುದಾಗಿ ಸತೀಶ್ ಕುಂದರ್ ತಿಳಿಸಿದ್ದಾರೆ.

ನಗೆ ಬೀರಿದ ರೈತರು: ಕರಾವಳಿ-ಮಲೆನಾಡು ಭತ್ತದ ಬೆಳೆಗಾರರಿಗೆ ಹೆಕ್ಟೆರ್‌ಗೆ 7500 ರೂ. ಪ್ರೋತ್ಸಾಹ ಧನ ಘೋಷಣೆ ರೈತರಿಗೆ ಸಂತಸ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಕೃಷಿ ಮತ್ತು ರೈತರಿಗೆ ಬಂಪರ್ ಕೊಡುಗೆ ನೀಡಿವೆ ಎಂದು ಜಿಲ್ಲಾ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಉಡುಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ.