ಉಳ್ಳಾಲ: ಪರ್ಸಿನ್ ಬೋಟ್‌ನ ಹಗ್ಗ ತುಂಡಾಗಿ ಸಣ್ಣ ದೋಣಿ (ಡೆಂಗಿ) ಮೂಲಕ ಆಳಸಮುದ್ರದಲ್ಲಿ ಬರೋಬ್ಬರಿ 30 ಗಂಟೆ ಬಾಕಿಯಾಗಿ ಮಂಗಳವಾರ ಮಲ್ಪೆ ಮೀನುಗಾರರಿಂದ ರಕ್ಷಣೆಗೊಳಗಾದ ಉಳ್ಳಾಲ ಹೊಯ್ಗೆ ನಿವಾಸಿ ಅರ್ಥರ್ ಸುನೀಲ್ ಕುವೆಲ್ಲೋ, ಈ ಅವಧಿಯಲ್ಲಿ ಕೇವಲ ನೀರು ಕುಡಿದು ಜೀವ ಉಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕಳೆದ 35 ವರ್ಷಗಳಿಂದ ಮೀನುಗಾರಿಕೆಯಲ್ಲಿ ಪಳಗಿರುವ ಸುನೀಲ್ ಕುವೆಲ್ಲೋ (45), ಲಾಕ್‌ಡೌನ್ ಸಂದರ್ಭ ಕೆಲಸವಿಲ್ಲದೆ ಮನೆಯಲ್ಲೇ ಉಳಿದಿದ್ದರು. ಈಗ ಮೀನುಗಾರಿಕೆ ಆರಂಭವಾಗಿದ್ದರಿಂದ ತಮ್ಮ ಊರಿನವರಾದ ಫಿಲಿಪ್, ರೇಮಂಡ್ ಡಿಸೋಜ, ರಂಜಿತ್ ಡಿಸೋಜ, ಡಾರ್ವಿನ್, ಅನಿಲ್, ಜೋಸ್ಟಿನ್, ಕಿಶನ್, ಅಶೋಕ್ ಡಿಸೋಜ, ಸ್ಟೀವನ್, ನವೀನ್ ವೇಗಸ್ ಸಹಿತ ಮೊಗವೀರಪಟ್ನ ಹಾಗೂ ಉಳ್ಳಾಲದ 30 ಮಂದಿ ತಂಡದೊಂದಿಗೆ ಸೆ.6ರಂದು ಬೆಳಗ್ಗೆ 6 ಗಂಟೆಗೆ ‘ಫಾಲ್ಕಾನ್’ ಹೆಸರಿನ ಪರ್ಸಿನ್ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅದೇ ದಿನ ತಡರಾತ್ರಿ ಸಮುದ್ರ ತಟದಿಂದ 28 ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಆಳಸಮುದ್ರದಲ್ಲಿ ಭಾರೀ ಗಾಳಿ ಬೀಸಿತ್ತು.
ಆ ವೇಳೆ ಸುನೀಲ್ ಸಣ್ಣ ದೋಣಿ ಮೂಲಕ ಬಲೆ ಬೀಸಲು ತೆರಳಿದ್ದರು.
ಆದರೆ ತಾಂತ್ರಿಕ ತೊಂದರೆಯಿಂದಾಗಿ ಪರ್ಸಿನ್ ಬೋಟ್ ಕೆಟ್ಟು ನಿಂತಿದ್ದರಿಂದ, ಇನ್ನೊಂದು ಮೀನುಗಾರಿಕೆ ದೋಣಿಯ ಮೂಲಕ ಎಳೆಯಲು ಪ್ರಯತ್ನಿಸಲಾಗಿದೆ. ಆಗ ಸಣ್ಣ ದೋಣಿಗೆ ಕಟ್ಟಲಾಗಿದ್ದ ಹಗ್ಗ ತುಂಡಾಗಿ, ಸುನೀಲ್ ನಾಪತ್ತೆಯಾಗಿದ್ದರು. ದೋಣಿಯಲ್ಲಿದ್ದ ಮೀನುಗಾರರು ಇತರ ದೋಣಿಯವರಿಗೆ ಮಾಹಿತಿ ನೀಡಿ ಹುಡುಕುವಂತೆ ಮನವಿ ಮಾಡಿ ತಾವೂ ಹುಡುಕಾಟ ನಡೆಸಿದ್ದರು. ಹಲವು ಗಂಟೆ ಹುಡುಕಾಡಿದರೂ ಪ್ರಯೋಜನವಾಗದ ಕಾರಣ ಮರುದಿನ ಬೆಳಗ್ಗೆ 7 ಗಂಟೆಗೆ ಮಂಗಳೂರು ಧಕ್ಕೆ ಪ್ರವೇಶಿಸಿದ್ದರು. ಸತತ 30 ಗಂಟೆಗಳ ಕಾಲ ಈಜಿದ ಅವರು ಮಂಗಳವಾರ ಮಲ್ಪೆಯಲ್ಲಿ ದಡ ಸೇರುವ ಮೂಲಕ ಸಾವನ್ನು ಗೆದ್ದು ಬಂದಿದ್ದಾರೆ.
ನಾವು ಬಂದಿದ್ದ ಬೋಟು ಮತ್ತು ಸಹಪಾಠಿಗಳ ಸಂಪರ್ಕ ಕಳೆದುಕೊಂಡ ನಾನು 30 ಗಂಟೆ ಆಳಸಮುದ್ರದಲ್ಲಿ ಬದುಕುಳಿದಿದ್ದೇ ಅಚ್ಚರಿ. ಆ ಅವಧಿಯಲ್ಲಿ ಕೇವಲ ಮಳೆ ನೀರು ಮಾತ್ರ ಕುಡಿದಿದ್ದೇನೆ. ಹಬ್ಬದ ದಿನವಾದರೂ ಮನೆ ಸೇರುವ ಭಾಗ್ಯ ಸಿಗಲಿ ಎಂದು ದೇವರಲ್ಲಿ ಬೇಡಿ, ತೊಕ್ಕೊಟ್ಟು ಚರ್ಚ್‌ಗೆ ಹರಕೆ ಹೊತ್ತುಕೊಂಡಿದ್ದೆ. ಒಂದೂವರೆ ದಿನ ಆಳಸಮುದ್ರದಲ್ಲಿ ದಿಕ್ಕು, ದೆಸೆ ಗೊತ್ತಿಲ್ಲದೆ ಕಳೆದು ಕೇರಳ ಕುಂಬಳೆಯ ಗುಡ್ಡಪ್ರದೇಶ ತಲುಪಿದಾಗ ಕಾಪುವಿನ ಲೈಟ್‌ಹೌಸ್ ಕಾಣಿಸಿದ್ದರಿಂದ ಬದುಕುಳಿಯುವ ವಿಶ್ವಾಸ ತಾಳಿದ್ದೆ.
– ಆರ್ಥರ್ ಸುನೀಲ್ ಕುವೆಲ್ಲೋ