ಬೋಟು ನಾಪತ್ತೆ ಪ್ರಕರಣ, ಮೀನುಗಾರರ ನಿಯೋಗಕ್ಕೆ ಸಿಎಂ ಅಭಯ

ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟು ಸಹಿತ ನಾಪತ್ತೆಯಾದ ಏಳು ಮಂದಿ ಮೀನುಗಾರರ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಮೀನುಗಾರ ಮುಖಂಡರು ಶುಕ್ರವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬಜೆಟ್ ಪೂರ್ವಭಾವಿಯಾಗಿ ಮೀನುಗಾರಿಕಾ ಸಮಸ್ಯೆ ಮತ್ತು ಸವಲತ್ತಿನ ಬಗ್ಗೆ ವಿಶೇಷ ಸಭೆಯಲ್ಲಿ ಭಾಗವಹಿಸಿದ್ದ ಮೀನುಗಾರರು ಬಳಿಕ ಮುಖ್ಯಮಂತ್ರಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ. ಕಾರ್ಯಾಚರಣೆಗೆ ಸಂಬಂಧಿಸಿ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ರಾಜ್ಯ ಸರ್ಕಾರ ಮೀನುಗಾರರ ಜತೆ ಇದೆ ಎಂಬ ಸಿಎಂ ಭರವಸೆ ನೀಡಿದ್ದಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ.ಕೊಟ್ಯಾನ್, ಮಲ್ಪೆ ಮೀನುಗಾರರ ಸಂಘ ಅಧ್ಯಕ್ಷ ಸತೀಶ್ ಕುಂದರ್, ಕಾರ್ಯದರ್ಶಿ ಗೋಪಾಲ ಆರ್.ಕೆ, ಮಂಗಳೂರು ಟ್ರಾಲ್ ಬೋಟ್ ಮೀನುಗಾರ ಸಂಘದ ಪ್ರದಾನ ಕಾರ್ಯದರ್ಶಿ ರಾಜೇಶ್ ಪುತ್ರನ್ ಉಳ್ಳಾಲ ನಿಯೋಗದಲ್ಲಿದ್ದರು.

ಬೋಟ್ ಶ್ರೀಲಂಕಾದಲ್ಲಿ ಪತ್ತೆ ಎಂದು ವದಂತಿ: ಮಲ್ಪೆ ಸುವರ್ಣ ತ್ರಿಭುಜ ಬೋಟು ನಾಪತ್ತೆಯಾದಾಗಿನಿಂದ ಇಲ್ಲಿವರೆಗೆ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಸುಳ್ಳು ಸುದ್ದಿಗಳಿಗೇನೂ ಕಡಿಮೆ ಇಲ್ಲ. ಶುಕ್ರವಾರವೂ ಇಂತದ್ದೊಂದು ಸುದ್ದಿ ಜನರನ್ನು ಗೊಂದಲಕ್ಕೆ ದೂಡಿತ್ತು. ನಾಪತ್ತೆಯಾದ ಮಲ್ಪೆಯ ಬೋಟು ಶ್ರೀಲಂಕಾದಲ್ಲಿ ಪತ್ತೆಯಾಗಿದೆ ಎಂದು ಎರಡು ಸಾಲಿನ ವಾಟ್ಸಪ್ ಸಂದೇಶ ವೈರಲ್ ಆಗಿತ್ತು. ಇದು ಸುಳ್ಳೆಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಂದುವರಿದ ಕಾರ್ಯಾಚರಣೆ: ಗೋವಾ-ಮಹಾರಾಷ್ಟ್ರ ಗಡಿಯ ಸಮುದ್ರ ಆಳದಲ್ಲಿ ಬೋಟ್‌ನ ಅವಶೇಷ ಪತ್ತೆಯಾದ ಹಿನ್ನೆಲೆಯಲ್ಲಿ ಸಟ್ಲೇಜ್ ಯುದ್ಧ ನೌಕೆಯಿಂದ ಸೋನಾರ್ ತಂತ್ರಜ್ಞಾನ ಬಳಸಿ 3ಡಿ ಮ್ಯಾಪಿಂಗ್ ಪ್ರಕ್ರಿಯೆ ಮುಂದುವರಿದಿದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸಂಪೂರ್ಣ ಚಿತ್ರಣ ದೊರೆಯುವ ನಿರೀಕ್ಷೆ ಎಂದು ತಿಳಿದು ಬಂದಿದೆ.