ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

ಕಾರವಾರ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೊ ನೆರವು ಕೋರಲಾಗಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ಮೀನುಗಾರಿಕೆ ಬೋಟ್​​​ನಲ್ಲಿದ್ದ ಕುಮಟಾ ತಾಲೂಕು ಮಾದನಗೆರೆ ಸತೀಶ್ ಈಶ್ವರ ಹರಿಕಂತ್ರ ಮನೆಗೆ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯತುಂಬಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಡಿಸೆಂಬರ್ 13ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಏಳು ಮೀನುಗಾರರಿದ್ದ ಬೋಟ್ 15ರ ರಾತ್ರಿ ಒಂದು ಗಂಟೆವರೆಗೆ ಸಂಪರ್ಕದಲ್ಲಿದ್ದು ನಂತರ ಸಂಪರ್ಕಕ್ಕೆ ಸಿಗಲಿಲ್ಲ. ಮೀನುಗಾರರ ಪತ್ತೆಗೆ ನಿರಂತರ ಪ್ರಯತ್ನಗಳ ನಡೆಯುತ್ತಿವೆ. ಈ ಸಂಬಂಧ ಉಪಗ್ರಹ ಮೂಲಕ ಪತ್ತೆ ಮಾಡಲು ಇಸ್ರೋಗೂ ಮನವಿ ಮಾಡಲಾಗಿದೆ ಎಂದು ಹೇಳಿದರು.

ಪ್ರಕರಣ ಸಂಬಂಧ ಡಿ 22ರಂದು ದೂರು ದಾಖಲಿಸಿಕೊಳ್ಳಲಾಗಿದೆ. ಮೀನುಗಾರರ ಪತ್ತೆಗಾಗಿ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ರಾಜ್ಯ ಸರ್ಕಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳೂ ಸೇರಿದಂತೆ ಶಂಕಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ. ಸಮುದ್ರದಲ್ಲೂ ಕೂಡ ಹೆಲಿಕಾಪ್ಟರ್ ಮತ್ತು ತಟ ರಕ್ಷಣಾ ಪಡೆಗಳ ಮೂಲಕ ಪತ್ತೆಗೆ ಪ್ರಯತ್ನಿಸಲಾಗಿದೆ ಎಂದರು.

ಈಗಾಗಲೆ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನೌಕಾದಳವನ್ನು ಬಳಸಿಕೊಳ್ಳಲು ಕೋರಲಾಗಿದೆ. ಅಲ್ಲದೆ, ಗೂಗಲ್ ಸೇರಿದಂತೆ ಉಪಗ್ರಹ ಸಂಸ್ಥೆಗಳ ನೆರವು ಪಡೆಯಲಾಗಿದೆ ಎಂದರು.

ಗುಜರಾತ್ ಗಡಿದಾಟಿ ಪಾಕಿಸ್ತಾನ ಗಡಿ ಪ್ರವೇಶಿಸುವ ಸಾಧ್ಯತೆ ಕಡಿಮೆ. ಬೋಟ್​​ನಲ್ಲಿ ಅಷ್ಟು ಪ್ರಮಾಣದ ಇಂಧನ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿಂದಿನ ಕೆಲವು ಪ್ರಕರಣಗಳ ಆಧಾರದಂತೆ ಬೇರೆ ರಾಜ್ಯದ ಮೀನುಗಾರರು ನಮ್ಮ ಮೀನುಗಾರರನ್ನು ಅಪಹರಿಸಿರುವ ಸಂಶಯ ಇದೆ. ಈ ವಿಚಾರದಲ್ಲೂ ನೆರೆ ರಾಜ್ಯಗಳ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಮಾಡಲಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಮೀನುಗಾರರು ಜೀವಂತವಾಗಿರುತ್ತಾರೆ ಎಂಬ ಅಚಲ ವಿಶ್ವಾಸ ನಮ್ಮ ಸರ್ಕಾರದ್ದು. ಅವರ ಪತ್ತೆಗೆ ಅವಿರತ ಪ್ರಯತ್ನಗಳ ನಡೆದಿದ್ದು ಶೀಘ್ರವೇ ನಿರೀಕ್ಷಿತ ಫಲಿತಾಂಶಕ್ಕೆ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.

ಸ್ಥಳೀಯ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಎಸ್ ಪಾಟೀಲ್ ಸೇರಿದಂತೆ ವಿವಿಧ ಪ್ರಮುಖರು ಈ ಸಂದರ್ಭದಲ್ಲಿದ್ದರು.

Leave a Reply

Your email address will not be published. Required fields are marked *