ಉಡುಪಿಯಲ್ಲಿ ಮೀನು ಬೆಲೆ ಇಳಿಕೆ

ಉಡುಪಿ/ಮಂಗಳೂರು: ಗೋವಾ ಸರ್ಕಾರ ಕರ್ನಾಟಕದ ಮೀನು ಆಮದಿಗೆ ನಿಷೇಧ ಹೇರಿರುವ ಕಾರಣ ಜಿಲ್ಲೆಯಲ್ಲಿ ಮೀನಿನ ಧಾರಣೆ ಕುಸಿದಿದ್ದು, ಮೀನುಗಾರರು ಕಂಗಾಲಾಗಿದ್ದಾರೆ. ಮಲ್ಪೆಯಲ್ಲಿ ಸಮುದ್ರ ಮೀನು (ಅಂಜಲ್ ಮೀನು) 2 ವಾರದ ಹಿಂದೆ ಒಂದು ಕಿಲೋಗೆ 600 ರೂ. ದರ ಇತ್ತು. ಆದರೆ ಈಗ 300 ರೂ.ಗೆ ಮಾರಾಟವಾಗುತ್ತಿದೆ. ಅದೇ ರೀತಿ ಕಪ್ಪು ಹಾಗೂ ಬಿಳಿ ಪೋಂಫ್ರೆಟ್ ಮೀನುಗಳ ಧಾರಣೆ ಸಹ ಕುಸಿದಿದ್ದು, ಕಪ್ಪು ಮೀನು 250 ರೂ, ಬಿಳಿ ಪೋಂಫ್ರೆಟ್ ಮೀನು 500 ರೂ.ಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.

ಮಂಗಳೂರಿನಲ್ಲಿ ಏರುಗತಿ: ಕರ್ನಾಟಕ ಕರಾವಳಿಯ ಮೀನಿಗೆ ಗೋವಾ ನಿರ್ಬಂಧ ಹೇರಿರುವುದರಿಂದ ಯಾವುದೇ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಯಲ್ಲಿ ಗೋಚರಿಸುತ್ತಿಲ್ಲ. ದೀಪಾವಳಿ ಹಬ್ಬದ ತೃತೀಯ ಹಾಗೂ ಕೊನೆಯ ದಿನವಾದರೂ ಮಂಗಳೂರು ಮಾರುಕಟ್ಟೆಯಲ್ಲಿ ಮೀನು ದರ ಏರುಗತಿಯಲ್ಲಿ ಸಾಗಿದೆ. ಎರಡು ದಿನ ಹಿಂದೆ ಕೆ.ಜಿ.ಗೆ 350 ರೂ. ಇದ್ದ ಅಂಜಲ್ ಮೀನಿನ ದರ ಗುರುವಾರ 450 ರೂ.ವಿಗೆ ಏರಿದೆ. ಇದೇ ಅವಧಿಯಲ್ಲಿ ಕೆ.ಜಿ.ಗೆ 70 ರೂ. ಇದ್ದ ಬಂಗುಡೆ ದರ 90 ರೂ.ವಿಗೆ ಏರಿಕೆಯಾಗಿದೆ.

ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ: ಕರಾವಳಿ ಸಹಿತ ವಿವಿಧ ರಾಜ್ಯಗಳಿಂದ ಗೋವಾ ಸರ್ಕಾರ ಮೀನು ಆಮದು ನಿಷೇಧಿಸಿರುವುದನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಸರ್ಕಾರದ ಅಧಿಕೃತ ಲ್ಯಾಬ್‌ಗಳಲ್ಲಿ ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿದಾಗ ಮೀನಿನಲ್ಲಿ ರಾಸಾಯನಿಕ ಪತ್ತೆಯಾಗಿರಲಿಲ್ಲ. ಮೀನಿಗೆ ಫಾರ್ಮಲಿನ್ ಸಿಂಪಡಿಸಿಲ್ಲ, ಸೇವನೆಗೆ ಯೋಗ್ಯವಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳೇ ಹೇಳಿದ್ದರು. ಆದ್ದರಿಂದ ಈ ನಿಷೇಧ ಸರಿಯಲ್ಲ. ಗೋವಾದ ಕೆಲವು ಮೀನು ಮಾರಾಟಗಾರರು ತಮ್ಮ ಸ್ವಾರ್ಥಕ್ಕಾಗಿ ಮೀನಿನ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಲಾಭಗಳಿಸುವ ದುರಾಸೆಯಿಂದ ರಾಸಾಯನಿಕ ಬಳಕೆಯ ಸಬೂಬು ನೀಡಿ ಮೀನು ಆಮದು ನಿಷೇಧವಾಗುವಂತೆ ಮಾಡಿದ್ದಾರೆ ಎಂದವರು ಆರೋಪಿಸಿದ್ದಾರೆ.

ಈ ನಿಷೇಧದಿಂದ ರಾಜ್ಯದ ಮತ್ಸೊೃೀದ್ಯಮದ ಕೋಟ್ಯಂತರ ರೂ. ವ್ಯಾಪಾರ ವಹಿವಾಟು ಸ್ತಬ್ಧವಾಗಿದ್ದು, ಈಗಾಗಲೇ ಮತ್ಸ್ಯಕ್ಷಾಮ, ಇಂಧನದ ಬೆಲೆ ಏರಿಕೆ ಹಾಗೂ ವಿವಿಧ ಸಮಸ್ಯೆಗಳನ್ನು ಅನುಭವಿಸಿರುವ ಮೀನುಗಾರರ ಪರಿಸ್ಥಿತಿ ಇನ್ನಷ್ಟು ಹದಗೆಡಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಈ ಸಂಕಷ್ಟವನ್ನು ಮನಗಂಡು ಕೂಡಲೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಮಂಗಳೂರು ಕರಾವಳಿ ಪ್ರದೇಶದಲ್ಲಿ ಹಿಡಿದು ತರುವ ಮೀನುಗಳ ಬಗ್ಗೆ ಕರಾವಳಿಯ ಜನತೆ ವಿಶ್ವಾಸ ಹೊಂದಿದ್ದಾರೆ. ಇಂದಿಗೂ ಮಾರುಕಟ್ಟೆಯಲ್ಲಿ ಇಲ್ಲಿನ ಮೀನುಗಳು ಗರಿಷ್ಠ ಬೇಡಿಕೆ ಹೊಂದಿರುವುದೇ ಇದಕ್ಕೆ ಸಾಕ್ಷಿ. ಅಲ್ಲದೆ ತನ್ನ ವೃತ್ತೀ ಜೀವನದ ಸುದೀರ್ಘ ಅವಧಿಯಲ್ಲಿ ತಿನ್ನುವ ಮೀನನ್ನು ವಿಷಕಾರಿ ವಸ್ತುಗಳಿಂದ ಜೋಪಾನವಾಗಿಡುವ ಕೆಲಸ ಇಲ್ಲಿ ಮಾಡಿರುವುದನ್ನು ಕಂಡಿಲ್ಲ.
|ದಿವಾಕರ ಉಳ್ಳಾಲ್, ಉಪಾಧ್ಯಕ್ಷರು, ಸಣ್ಣ ಟ್ರಾಲ್ ಬೋಟ್ ಮೀನುಗಾರರ ಸಂಘ (ದ.ಕ)