ಮತ್ಸೃ ಸಂಕುಲಕ್ಕೆ ತ್ಯಾಜ್ಯ ಸಂಕಷ್ಟ

ರಾಘವೇಂದ್ರ ಪೈ ಗಂಗೊಳ್ಳಿ

ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ತಾಲೂಕಿನ ಪ್ರಮುಖ ಐದು ನದಿಗಳು ಸಂಗಮಿಸಿ ಸಮುದ್ರ ಸೇರುತ್ತಿದ್ದು, ಈ ನದಿಯಲ್ಲಿ ತ್ಯಾಜ್ಯ ತುಂಬಿ ತುಳುಕಾಡುತ್ತಿದೆ. ಹೀಗಾಗಿ ನದಿಯಲ್ಲಿ ಜಲಚರಗಳು ಸಂಕಷ್ಟ ಅನುಭವಿಸುವಂತಾಗಿದ್ದು, ಮತ್ಸ್ಯೋದ್ಯಮಕ್ಕೂ ಇದರಿಂದ ತೊಂದರೆಯಾಗುತ್ತಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕುಸಿದಿರುವುದರಿಂದ ಮತ್ಸ್ಯ ಸಂಕುಲ ಕೂಡ ಕಡಿಮೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನದಿಯಲ್ಲಿ ಅತಿ ಹೆಚ್ಚು ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದು ಅಪಾಯ ಆಹ್ವಾನಿಸುತ್ತಿದೆ.

ನದಿ ಪಾತ್ರದ ತೀರ ಪ್ರದೇಶಗಳಲ್ಲಿನ ಜನರು ತ್ಯಾಜ್ಯಗಳನ್ನು ನದಿಗೆ ಹಾಕುತ್ತಿರುವ ಕಾರಣ ನದಿಯಲ್ಲಿ ತ್ಯಾಜ್ಯದ ಪ್ರಮಾಣ ದಿನೇದಿನೆ ಹೆಚ್ಚಾಗುತ್ತಿದೆ. ಅನೇಕ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ಜನರು ಹಾಗೂ ಕೆಲವೊಂದು ಸ್ಥಳೀಯಾಡಳಿತ ಸಂಸ್ಥೆಗಳು ನದಿಗಳಿಗೆ ತ್ಯಾಜ್ಯ ಎಸೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲೂಕಿನ ಐದು ಪ್ರಮುಖ ನದಿಗಳು ಬಂದು ಸೇರುವ ಗಂಗೊಳ್ಳಿಯ ನದಿ ತೀರ ಪ್ರದೇಶಗಳಲ್ಲಿ ತ್ಯಾಜ್ಯದ ಉಪಟಳವೂ ಹೆಚ್ಚಾಗುತ್ತಿದೆ.

ಶೌಚಗೃಹದ ನೀರೂ ನದಿಗೆ: ಇನ್ನೊಂದೆಡೆ ಗಂಗೊಳ್ಳಿ, ಕುಂದಾಪುರ ಮೊದಲಾದ ಅನೇಕ ಕಡೆ ಶೌಚಗೃಹದ ಕಲುಷಿತ ನೀರು ಹಾಗೂ ತ್ಯಾಜ್ಯವನ್ನು ನೇರವಾಗಿ ನದಿಗಳಿಗೆ ಬಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಪಂಚಗಂಗಾವಳಿ ನದಿಯಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರು ನದಿಯ ತ್ಯಾಜ್ಯದಿಂದ ಕಂಗೆಟ್ಟಿದ್ದಾರೆ. ಮೀನಿನ ಬಲೆಯಲ್ಲಿ ಯಥೇಚ್ಛ ಪ್ರಮಾಣದಲ್ಲಿ ತ್ಯಾಜ್ಯವೇ ಸಿಗುತ್ತಿದ್ದು ಬಲೆಗಳಿಂದ ತ್ಯಾಜ್ಯ ಬೇರ್ಪಡಿಸಲು ಮೀನುಗಾರರು ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರು ಸಮಸ್ಯೆ ತೋಡಿಕೊಂಡಿದ್ದಾರೆ.

ಪಂಚಗಂಗಾವಳಿ ನದಿಯಲ್ಲಿ ತ್ಯಾಜ್ಯದ ಹಾವಳಿ ಹೆಚ್ಚಾಗುತ್ತಿದೆ. ನದಿಯಲ್ಲಿ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದ್ದು, ಮೀನು ಬಲೆಗಳಲ್ಲಿ ತ್ಯಾಜ್ಯ ಸೇರಿಕೊಳ್ಳುತ್ತಿದ್ದು, ತ್ಯಾಜ್ಯ ಬೇರ್ಪಡಿಸುವುದು ಸಮಸ್ಯೆಯಾಗಿ ಬಲೆಗಳಿಗೆ ಹಾನಿಯಾಗುತ್ತಿದೆ. ಪಂಚಗಂಗಾವಳಿ ನದಿಯಲ್ಲಿ ಹೆಚ್ಚುತ್ತಿರುವ ತ್ಯಾಜ್ಯದಿಂದ ಮೀನುಗಾರರಿಗೆ ತುಂಬ ತೊಂದರೆಯಾಗುತ್ತಿದೆ .
| ಗೋಪಾಲ ಖಾರ್ವಿ ಸ್ಥಳೀಯ ಮೀನುಗಾರ

ನದಿ ತೀರದಲ್ಲಿ ತ್ಯಾಜ್ಯ ಪ್ರಮಾಣ ಅತಿ ಹೆಚ್ಚು ಸಂಗ್ರಹಗೊಳ್ಳುತ್ತಿದ್ದು, ನದಿ ತೀರಗಳಲ್ಲಿ ತ್ಯಾಜ್ಯಗಳೇ ಹರಡಿಕೊಂಡಿದೆ. ತ್ಯಾಜ್ಯಗಳಿಂದ ಪರಿಸರದಲ್ಲಿ ವಿಪರೀತ ಗಬ್ಬು ವಾಸನೆ, ನುಸಿ ಕಾಟ ಹೆಚ್ಚಾಗಿದ್ದು ತೀರದಲ್ಲಿ ವಾಸಿಸುವುದು ಕಷ್ಟವಾಗುತ್ತಿದೆ. ನದಿಗಳು ಮಲಿನವಾಗದಂತೆ ತಡೆಯಲು ಮತ್ತು ನದಿ ತೀರಗಳಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಹಾಗೂ ಪಂಚಗಂಗಾವಳಿ ನದಿ ಶುದ್ಧೀಕರಣಗೊಳಿಸಲು ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.
| ಬಾಲಕೃಷ್ಣ ಶೆಣೈ ಬಂದರು ಕಳವಿನ ಬಾಗಿಲು ನಿವಾಸಿ, ಗಂಗೊಳ್ಳಿ