ಮೀನುಗಳ ಮಾರಣಹೋಮ

ಮಂಡ್ಯ: ಕೆರೆಗಳಿಗೆ ಮೋರಿ, ಚರಂಡಿಗಳ ತ್ಯಾಜ್ಯ ಸೇರುತ್ತಿರುವುದರ ಜತೆಗೆ ಜನತೆ ಕಸ, ಕಡ್ಡಿ, ಪ್ಲಾಸ್ಟಿಕ್ ಎಸೆಯುತ್ತಿದ್ದು, ಮಲೀನ ನೀರಿನಿಂದಾಗಿ ಮೀನುಗಳ ಮಾರಣ ಹೋಮ ನಡೆಯುತ್ತಿದೆ.
ಮದ್ದೂರು ತಾಲೂಕಿನ ಮಾದರಹಳ್ಳಿ, ದೇಶಹಳ್ಳಿ, ಮಂಡ್ಯ ತಾಲೂಕಿನ ಬೇಲೂರು ಕೆರೆಗಳಲ್ಲಿ ನೂರಾರು ಮೀನುಗಳು ಮೃತಪಟ್ಟಿದ್ದು, ಜನರ ಕಣ್ಣಲ್ಲಿ ಕಂಬನಿ ತರಿಸುತ್ತಿದೆ.
ಶುಕ್ರವಾರ ರಾತ್ರಿಯಿಂದಲೇ ಕೆರೆಯಲ್ಲಿ ಮೀನುಗಳು ಸಾಯಲಾರಂಭಿಸಿದ್ದು, ಶನಿವಾರ, ಭಾನುವಾರ ಕೆರೆಯಲ್ಲಿ ಮೀನುಗಳು ತೇಲುತ್ತಿವೆ. ಒಂದೊಂದು ಮೀನು ಕನಿಷ್ಠ 3ರಿಂದ 5 ಕೆಜಿ ತೂಕ ಬರಲಿದ್ದು, ಒಟ್ಟೊಟ್ಟಿಗೆ ಮೃತಪಟ್ಟಿರುವುದು ಮೀನುಗಾರರನ್ನು ಚಿಂತೆಗೀಡು ಮಾಡಿದೆ.
ಸಾಕಷ್ಟು ಬಂಡವಾಳ ಹಾಕಿ ಒಟ್ಟಿಗೆ ಮೀನು ಹಿಡಿದುಕೊಂಡು ಸಂಪಾದನೆ ಮಾಡಿಕೊಳ್ಳೋಣ ಎಂದು ಕಾದಿದ್ದ ಮೀನುಗಾರರು ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಕೆರೆಗಳಿಗೆ ಗ್ರಾಮಗಳ ಮೋರಿ ನೀರು ಬರುವಂತೆ ಸಂಪರ್ಕ ಕಲ್ಪಿಸಿರುವುದರ ಜತೆಗೆ ಜನತೆ ಪ್ಲಾಸ್ಟಿಕ್, ಮದ್ಯದ ಪ್ಯಾಕೆಟ್‌ಗಳು, ಬಾಟಲ್‌ಗಳು ಸೇರಿದಂತೆ ಎಲ್ಲ ತ್ಯಾಜ್ಯವನ್ನು ಕೆರೆಗೆ ಎಸೆದಿದ್ದು, ನೀರು ಕಲುಷಿತವಾಗುತ್ತಿದೆ. ಇದರಿಂದಾಗಿ ನೀರಿನಲ್ಲಿ ಮೀನುಗಳಿಗೆ ಆಮ್ಲಜನಕದ ಕೊರತೆಯುಂಟಾಗಿ ಮೃತಪಡುತ್ತಿವೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಬೇಬಿನ್ ಬೋಪಣ್ಣ ವಿಜಯವಾಣಿಗೆ ತಿಳಿಸಿದರು.

ಆಮ್ಲಜನಕದ ಕೊರತೆ ಏಕೆ ?: ಕೆರೆಯಲ್ಲಿರುವ ನೀರಿನ ಸಸ್ಯಗಳಿಗೂ ಆಮ್ಲಜನಕದ ಅವಶ್ಯಕತೆ ಇರುತ್ತದೆ. ನೀರು ಮಲಿನವಾಗದಿದ್ದರೆ, ಆಮ್ಲಜನಕದ ಕೊರತೆ ಎದುರಾಗದು. ಮಲೀನವಾಗುತ್ತಿದ್ದಂತೆ ಆಮ್ಲಜನಕ ಕಡಿಮೆಯಾಗುತ್ತದೆ. ದಪ್ಪಗಿರುವ ಮೀನುಗಳು ಹೆಚ್ಚು ಸಂಚರಿಸದೆ ಗಿಡಗಳ ಮಧ್ಯ ಒಂದೆಡೆ ನಿಲ್ಲುತ್ತವೆ.
ಆಗ ಆಮ್ಲಜನಕದ ಕೊರತೆ ಎದುರಾಗಿ, ಉಸಿರಾಟದ ತೊಂದರೆಯಾಗುತ್ತದೆ. ಬೇರೆಡೆ ಸಂಚರಿಸಲಾಗದ ಸ್ಥಿತಿಗೆ ಸಿಲುಕಿ ಮೃತಪಡುತ್ತವೆ ಎಂದವರು ಹೇಳಿದರು.

ಜತೆಗೆ ಈಗ ಬಿಸಿಲಿನ ತಾಪ ಕೂಡ ಹೆಚ್ಚಳವಾಗುತ್ತಿದ್ದು, ಅದರಿಂದಲೂ ಆಮ್ಲಜನಕ ಕೊರತೆ ಎದುರಾಗುವ ಆತಂಕವಿದೆ. ವಿಶೇಷವೆಂದರೆ ನೀರಿನ ಸಸ್ಯಗಳಿಲ್ಲದ ಕೆರೆಗಳಲ್ಲಿ ಮೀನುಗಳು ಸಾಯುವುದಿಲ್ಲ ಎಂದು ಮೀನುಗಾರರು ಹೇಳುತ್ತಾರೆ.

ಕನಿಷ್ಠ 2 ದಿನಗಳಿಗೊಮ್ಮೆ ಮೀನು ಹಿಡಿಯಲು ದೋಣಿಗಳನ್ನು ಕೆರೆಯಲ್ಲಿ ತಿರುಗಾಡಿದಾಗ, ಬಲೆ ಹಾಕಿದಾಗ ಮೀನುಗಳು ಸ್ಥಳ ಬದಲಿಸುತ್ತವೆ. ವಾರಗಟ್ಟಲೇ ಮೀನು ಹಿಡಿಯಲು ಮುಂದಾಗದಿರುವುದು ಕೂಡ ಮೀನುಗಳ ಸಾವಿಗೆ ಕಾರಣ ಎಂಬುದು ಮೀನುಗಾರರ ಅಭಿಪ್ರಾಯ.

ಒಟ್ಟಾರೆ, ಸ್ವಚ್ಛತೆ ಬಗ್ಗೆ ಜನತೆ ಕಿಂಚಿತ್ತು ಕಾಳಜಿ ವಹಿಸದೆ ಎಲ್ಲ ತ್ಯಾಜ್ಯವನ್ನು ಕೆರೆ ಕಟ್ಟೆಗಳಿಗೆ ಹಾಕುತ್ತಿರುವುದು, ಜಲಮೂಲಗಳಿಗೆ ಸುರಿಯುತ್ತಿದ್ದಾರೆ. ಇದರಿಂದಾಗಿ ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇನ್ನಾದರೂ ಜಲಮೂಲಗಳನ್ನು ರಕ್ಷಣೆ ಮಾಡಿಕೊಳ್ಳದಿದ್ದರೆ ಇನ್ನು ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಅನುಮಾನವಿಲ್ಲ.

ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಕಸ ಮತ್ತು ತ್ಯಾಜ್ಯ ತುಂಬಿದಾಗ ನೀರಿನಲ್ಲಿ ಅಮ್ಲಜನಕ ಕಡಿಮೆಯಾಗಿ ಈ ರೀತಿ ಮೀನು ಸಾಯಿತ್ತವೆ. ಜನತೆ ಕೆರೆ, ಕಟ್ಟೆ ನಾಲೆಗಳಿಗೆ ಯಾವುದೇ ರೀತಿಯ ತ್ಯಾಜ್ಯ ಹಾಕುವುದು ಸರಿಯಲ್ಲ.
ಕೆ.ಬೇಬಿನ್ ಬೋಪಣ್ಣ ಹಿರಿಯ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ ಮಂಡ್ಯ