ಬಾಯಲ್ಲಿ ನೀರೂರಿಸಿದ ಮತ್ಸ್ಯ ಖಾದ್ಯ

<ಮಲ್ಪೆ ಬೀಚ್‌ನಲ್ಲಿ ಮತ್ಸ್ಯ ಮೇಳ * ಮರಳು ಶಿಲ್ಪ ರಚನೆ, ಕ್ರೀಡಾಕೂಟ >

ಅವಿನ್ ಶೆಟ್ಟಿ ಉಡುಪಿ
ಮೀನಿನ ತವಾ ಫ್ರೈ, ರವಾ ಫ್ರೈ, ಕರಿ ಇತ್ಯಾದಿ ನಾನಾ ಬಗೆಯ ಮೀನಿನ ಖಾದ್ಯಗಳು ಭಾನುವಾರ ಮಲ್ಪೆ ಮತ್ಸ್ಯ ಮೇಳದಲ್ಲಿ ಬಾಯಲ್ಲಿ ನಿರೂರಿಸಿದವು. ಮಲ್ಪೆ ಬೀಚ್‌ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್, ಮೀನುಗಾರಿಕಾ ಇಲಾಖೆ ಸಹಭಾಗಿತ್ವದಲ್ಲಿ ಭಾನುವಾರ ಬೃಹತ್ ಮತ್ಸ್ಯ ಮೇಳ ‘ಫಿಶ್ ಫೆಸ್ಟ್-2018’ ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಿತ್ತು. ಮಲ್ಪೆ ಬೀಚ್‌ನಲ್ಲಿ ನೆರೆದ ಸಾವಿರಾರು ಜನ ಬಗೆಬಗೆಯ ಮೀನು ಖಾದ್ಯಗಳನ್ನು ಸೇವಿಸಿ ಬಾಯಿ ಚಪ್ಪರಿಸಿದರು. ಮತ್ಸ್ಯ ಮೇಳದಲ್ಲಿ ವಿಶೇಷವಾಗಿ ಶ್ವಾನ ಪ್ರದರ್ಶನ, ಮರಳು ಶಿಲ್ಪ ರಚನೆ, ಕ್ರೀಡಾಕೂಟಗಳು ಗಮನ ಸೆಳೆದವು.

ಮೀನಿನ ಖಾದ್ಯಗಳು: ಫೆಡರೇಶನ್‌ನ ಐದಾರು ಮಳಿಗೆಯಲ್ಲಿ ಮೀನಿನ ಖಾದ್ಯಗಳು ಜನರನ್ನು ಆಕರ್ಷಿಸಿದವು. ಫ್ರೈ ಆಗುತಿದ್ದ ಮೀನುಗಳು ಜನರ ಬಾಯಲ್ಲಿ ನಿರೂರಿಸುವಂತಿದ್ದವು. ಬಂಗುಡೆ, ಕಾಣೆ, ನಂಗು, ಮೇಲುಗು, ಬೂತಾಯಿ, ಮಾಂಜಿ, ಅಂಜಲ್ ಮೀನಿನ ಬಿಸಿಬಿಸಿಯಾದ ರುಚಿಕರ ರವಾ ಮತ್ತು ತವಾ ಫ್ರೈಗೆ ಪ್ರವಾಸಿಗರು ಫಿದಾ ಆದರು. ಜನ ವಿವಿಧ ಮೀನಿನ ಕರಿ ಮತ್ತು ರುಮಾಲು ರೋಟಿ ಸವಿದರು. ತರಕಾರಿಯಲ್ಲಿ ಸೊಪ್ಪು ಪಲ್ಯ, ದಾಲ್ ಕರಿ ಗಮನ ಸೆಳೆದವು

ಗಮನ ಸೆಳೆದ ಕ್ರೀಡಾಕೂಟ: ಮತ್ಸೃ ಮೇಳದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರಿಗೆ ಕಬಡ್ಡಿ, ತ್ರೋಬಾಲ್, ಪುರುಷರಿಗೆ ವಾಲಿಬಾಲ್, ಕಬಡ್ಡಿ ಆಯೋಜಿಸಲಾಗಿತ್ತು. ಕಬಡ್ಡಿಯಲ್ಲಿ ಮಹಿಳೆಯರ ಎಂಟು ತಂಡ, ಪುರುಷರ 22 ತಂಡ ಭಾಗವಹಿಸಿದ್ದವು. ತ್ರೋನಲ್ಲಿ ಮಹಿಳೆಯರ ಒಂಭತ್ತು, ಕಬಡ್ಡಿಯಲ್ಲಿ ಪುರುಷರ 15 ತಂಡಗಳು ಭಾಗವಹಿಸಿತ್ತು. ವಿವಿಧ ವಯೋಮಾನದವರಿಗೆ ಮಲ್ಪೆ ಕಡಲಿನಲ್ಲಿ ಈಜು ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.

ಮರಳು ಶಿಲ್ಪಾ ರಚನೆ: ಮಲ್ಪೆ ಕಡಲ ಕಿನಾರೆಯಲ್ಲಿ ಮರಳು ಶಿಲ್ಪ ರಚನೆ ಆಕರ್ಷಕವಾಗಿತ್ತು. ಐದು ಮಂದಿ ಮರಳು ಶಿಲ್ಪಾಕಾರರು ಕರಾವಳಿ ಸಂಸ್ಕೃತಿ ಸಂಬಂಧಿಸಿ ಆಕರ್ಷಕ ಶಿಲ್ಪಕಲೆಗಳನ್ನು ರಚಿಸಿದ್ದರು. ಸಾಯಂಕಾಲ ನಡೆದ ಗಾಳಿಪಟ ಉತ್ಸವ ನೋಡುಗರ ಮನ ಸೆಳೆಯಿತು. ವಿವಿಧ ಬಣ್ಣದ ಗಾಳಿಪಟ ಹಾರಿಸುತ್ತ ಮಕ್ಕಳು, ಹಿರಿಯರು ರಂಜಿಸಿದರು. ಹಗ್ಗಜಗ್ಗಾಟ, ಚಿತ್ರ ಬಿಡಿಸುವ ಸ್ಪರ್ಧೆ ಆಕರ್ಷಣೆಯಾಗಿತ್ತು.

ಶ್ವಾನ ಪ್ರದರ್ಶನ: ಬೀಚ್‌ನಲ್ಲಿ ಆಯೋಜಿಸಲಾಗಿದ್ದ ಶ್ವಾನ ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಿತ್ತು. 50ಕ್ಕೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿ ಪ್ರತಿಭೆ ತೋರ್ಪಡಿಸಿದವು. ದೊಡ್ಡ ನಾಯಿಗಳ ಗಾಂಭೀರ್ಯ, ಪಪ್ಪಿ ಶ್ವಾನಗಳ ವಯ್ಯರ ನೋಡುಗರ ಮನಸೂರೆಗೊಳಿಸಿತು. ಭಾರತೀಯ ತಳಿಗಳು ಸೇರಿದಂತೆ ವಿದೇಶಿ ತಳಿಗಳ ಶ್ವಾನಗಳು ಕರಾಮತ್ತು ಪ್ರದರ್ಶಿಸಿದವು. ಶ್ವಾನ ಪ್ರೀತಿ ಹಾಗೂ ಅವುಗಳಿಗೆ ಸಿಗುವ ಆತಿಥ್ಯ ಎಲ್ಲರ ಮೆಚ್ಚುಗೆ ಪಡೆಯಿತು. ಪ್ರದರ್ಶನದಲ್ಲಿ ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೀವರ್, ಬುಲ್ ಡಾಗ್, ಲ್ಯಾಬ್ರಡರ್ ರಿಟ್ರೀವರ್ ಮೊದಲಾದ ತಳಿಗಳು ಭಾಗವಹಿಸಿದ್ದವು.

ಉದ್ಘಾಟನೆ ಕಾರ್ಯಕ್ರಮ: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ತೆಂಕನಿಡಿಯೂರು ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಪಾಟ್ಕರ್, ನಗರಸಭೆ ಸದಸ್ಯರಾದ ಲಕ್ಷ್ಮೀ ಮಂಜುನಾಥ್ ಕೊಳ, ಎಡ್ಲಿನ್ ಕರ್ಕಡ, ಸುಂದರ ಕಲ್ಮಾಡಿ, ವಿಜಯ ಕೊಡವೂರು ಉಪಸ್ಥಿತರಿದ್ದರು.

ಮೀನುಗಾರಿಕೆ ಹಾಗೂ ಮೀನು ಸೇವನೆ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯಾದ್ಯಂತ ಮುಂಬರುವ ದಿನಗಳಲ್ಲಿ ಫೆಡರೇಷನ್ ವತಿಯಿಂದ ಮತ್ಸ್ಯ ಕ್ಯಾಂಟೀನ್ ಆರಂಭಿಸಿ ತಾಜಾ ಮೀನಿನ ಖಾದ್ಯಗಳನ್ನು ಮತ್ಸೃ ಪ್ರಿಯರಿಗೆ ಒದಗಿಸುವ ಚಿಂತನೆ ಇದೆ. ಈ ಯೋಜನೆಗೆ ಪೂರ್ವಭಾವಿಯಾಗಿ ಮತ್ಸ್ಯ ಮೇಳ ಹಮ್ಮಿಕೊಳ್ಳಲಾಗಿದೆ.
– ಯಶ್‌ಪಾಲ್ ಸುವರ್ಣ, ಮೀನುಗಾರಿಕೆ ಫೆಡರೇಷನ್ ಅಧ್ಯಕ್ಷ