ಫಸಲ್ ಬಿಮಾ ಬೆಳೆ ವಿಮೆ ಬಿಡುಗಡೆ ಮಾಡಿ

ತಾಳಿಕೋಟೆ: ಭೀಕರ ಬರದಿಂದಾಗಿ ತಾಳಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆ ನಾಶವಾಗಿದ್ದು, ರೈತರು ಬೆಳೆಗಳಿಗೆ ವಿಮೆ ತುಂಬಿದ್ದಾರೆ. ತಾರತಮ್ಯ ಮಾಡದೆ ಎಲ್ಲ ರೈತರಿಗೆ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಸದಸ್ಯರು ತಹಸೀಲ್ದಾರ್ ಮೂಲಕ ಯುನೈಟೆಡ್ ಇಂಡಿಯಾ ಇನ್ಶೂರೇನ್ಸ್ ಕಂಪನಿ ಪ್ರಾದೇಶಿಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಎಲ್ಲ ಬೆಳೆಗಳು ನಷ್ಟವಾಗಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರು ಆರ್ಥಿಕ ಸಂಕಷ್ಟ ತಪ್ಪಿಸಿಕೊಳ್ಳಲು ಎರಡು ವರ್ಷಗಳಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ, ಕಳೆದ ಆರ್ಥಿಕ ವರ್ಷದಲ್ಲಿಯೂ ಭೀಕರ ಬರವಿದ್ದರೂ ಕೆಲವೊಂದು ರೈತರಿಗೆ ಮಾತ್ರ ಬೆಳೆ ವಿಮೆ ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೂಡ ರೈತರು ಬೆಳೆ ನಷ್ಟ ಅನುಭವಿಸಿದ್ದು, ಕೂಡಲೇ ವಿಮೆ ಮಾಡಿಸಿದ್ದ ಎಲ್ಲ ರೈತರಿಗೆ ಮುಂಗಾರು ಮತ್ತು ಹಿಂಗಾರು ಬೆಳೆ ವಿಮೆ ಪಾವತಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ಹರೀಶ ಕುಲಕರ್ಣಿ ಮನವಿ ಸ್ವೀಕರಿಸಿದರು. ತಾಲೂಕಾಧ್ಯಕ್ಷ ನಾಗರಾಜ ಮೋಟಗಿ, ಕಾರ್ಯಾಧ್ಯಕ್ಷ ಕುಮಾರಗೌಡ ಪಾಟೀಲ, ಸಂತೋಷ ಪೂಜಾರಿ, ಎಚ್.ಕೆ. ಕೆಂಬಾವಿ, ಎಸ್.ಬಿ. ಬಿಳೆಬಾವಿ, ನಿಂಗನಗೌಡ ದೇಸಾಯಿ, ಕಾಶಿನಾಥ ಯಾಳವಾರ, ದೇವೇಂದ್ರ ಪೂಜಾರಿ, ಅಶೋಕ ಕಲಬುರ್ಗಿ, ಮಲ್ಲು ಕುಂಬಾರ, ಶರಣಪ್ಪ, ಎಸ್.ಸಿ. ಚೋರಗಸ್ತಿ, ಶಿವಪ್ಪ ಅಗಸರ, ನಾಗು ಭಜಂತ್ರಿ, ರಾಜು ಕೊಡಗಾನೂರ ಇತರರು ಇದ್ದರು.