ಸುಗುಣೇಂದ್ರ ತೀರ್ಥ ಶ್ರೀಪಾದರ ಸಂಕಲ್ಪ
ಚತುರ್ಥ ಪರ್ಯಾಯದ ವರ್ಷಪೂರ್ಣ ಸಂಭ್ರಮ
ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ಶ್ರೀಕೃಷ್ಣನ ಸೇವಾ ಕೈಂಕರ್ಯದಲ್ಲಿ ನಿರತ ಪುತ್ತಿಗೆ ಮಠವು ಪರ್ಯಾಯ ಕೈಗೊಂಡು ಜ.18ಕ್ಕೆ ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದಲ್ಲಿ ಶನಿವಾರ ಸಂಭ್ರಮ ಆಚರಿಸಲಾಯಿತು.
ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ 2023ರ ಜ.18ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ತಮ್ಮ ಚತುರ್ಥ ಪರ್ಯಾಯ ಸ್ವೀಕರಿಸಿ, ಸರ್ವಜ್ಞ ಪೀಠ ಅಲಂಕರಿಸಿದ್ದರು. ಪರ್ಯಾಯದ ವಾರ್ಷಿಕೋತ್ಸವದ ನಿಮಿತ್ತ ಸುಶ್ರೀಂದ್ರ ಶ್ರೀಗಳು ಉಡುಪಿ ಕೃಷ್ಣನನ್ನು ದ್ವಿತೀಯ ವರ್ಷಕ್ಕೆ ಡೊಗ್ಗಾಲಿಡುತ್ತಿರುವ ಕುಸುಮಾಕರ, ಸುಮಸುಂದರ ಕೃಷ್ಣನಾಗಿ ಅಲಂಕಾರ ಮಾಡಿದ್ದರು.

12 ಬಗೆಯ ಕಾರ್ಯಕ್ರಮ
ಗೀತಾಮಂದಿರದಲ್ಲಿ ಮಾಧ್ಯಮದವರೊಂದಿಗೆ ಸುಗುಣೇಂದ್ರ ಶ್ರೀಗಳು ಮಾತನಾಡಿ, ಲಕ್ಷಾಂತರ ಜನರು ಈಗಾಗಲೇ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿದ್ದು, ಈವರೆಗೆ ಸುಮಾರು 25 ಸಾವಿರದಷ್ಟು ಜನರು ಬರೆದ ಪುಸ್ತಕವನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದ್ದಾರೆ. ಈ ಬಾರಿ ಲಕ್ಷಾಂತರ ಜನ ಉಡುಪಿಗೆ ಬಂದು ಸಮರ್ಪಣೆ ಮಾಡಲಿದ್ದು, ತನ್ನಿಮಿತ್ತ ಸಮಾರಂಭವೂ ನಡೆಯಲಿದೆ. ಈ ವರ್ಷ ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ಆಯೋಜಿಸುವ ಸಂಕಲ್ಪ ಮಾಡಿದ್ದೇವೆ. ಅಲ್ಲದೆ, 2ನೇ ವರ್ಷದ ಪರ್ಯಾಯದಲ್ಲಿ 12 ಬಗೆಯ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿದೆ ಎಂದರು.
ಸುಗುಣಮಾಲಾ 40ನೇ ವಾರ್ಷಿಕೋತ್ಸವ
ಕಳೆದ ಬಾರಿ 1,600 ಪಂಡಿತರನ್ನೊಳಗೊಂಡ ಸಮ್ಮೇಳನ ಮಾಡಿದ್ದೆವು. ಅಷ್ಟೋತ್ಸವ, ಬೃಹತ್ ಗೀತೋತ್ಸವ ನಡೆಸಲಾಗಿದ್ದು ಈ ವರ್ಷ ಅವುಗಳ ಸಮಾರೋಪ ನಡೆಯಲಿದೆ. ಮಠದ ಸುಗುಣಮಾಲಾ ಪತ್ರಿಕೆಯ ಹಾಗೂ ಪುತ್ತಿಗೆ ವಿದ್ಯಾಪೀಠದ 40ನೇ ವಾರ್ಷಿಕೋತ್ಸವ ನಡೆಯಲಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ್, ಬಿಹಾರ್ ಸೇರಿದಂತೆ ದೇಶಾದ್ಯಂತ ಈವರೆಗೆ 9 ಸಾವಿರದಷ್ಟು ಜನರು ಉಡುಪಿಗೆ ಬಂದು ಗೀತಾಪಾರಾಯಣ ಮಾಡಿದ್ದು, ಈ ವರ್ಷ 50 ಸಾವಿರ ಜನರು ಗೀತಾ ಪಾರಾಯಣ ಮಾಡುವ ನಿರೀಕ್ಷೆ ಇದೆ. ಗೀತೋತ್ಸವದ ಮುಂದುವರಿದ ಭಾಗವಾಗಿ ಈ ಬಾರಿ ಲಕ್ಷ ಜನರ ಕೂಡುವಿಕೆಯಲ್ಲಿ ಲಕ್ಷ ಕಂಠ ಗೀತೆ ಹಾಗೂ ಭಗವದ್ಗೀತೆ ಪಾರಾಯಣ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದರು.
ಉಡುಪಿ ಕಾರಿಡಾರ್ ಯೋಜನೆ
ರಥಬೀದಿಯಲ್ಲಿ ಜನದಟ್ಟಣೆ, ನೂಕುನುಗ್ಗಲು ನಿವಾರಿಸಲು ರಿಂಗ್ ರೋಡ್ ಮಾದರಿಯಲ್ಲಿ ಪರ್ಯಾಯ ರಸ್ತೆಯ ನಿರ್ಮಾಣದ ಹಾಗೂ ಕಾಶಿ ಮಾದರಿಯಲ್ಲಿ ಉಡುಪಿ ಕಾರಿಡಾರ್ ಮಾಡುವ ಕಲ್ಪನೆ ಹಾಗೂ ಸಂಕಲ್ಪವೂ ಇದ್ದು, ಉಡುಪಿ ನಗರಸಭೆಯ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಮಠದ ದಿವಾನ ನಾಗರಾಜ್ ಆಚಾರ್ಯ, ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇದ್ದರು.
ಕಳೆದ ವರ್ಷ ವಿಶ್ವ ಗೀತಾ ಪರ್ಯಾಯ ಘೋಷಣೆ
ಅದಮಾರು ಮಠದ ಹಿರಿಯ ಶ್ರೀಗಳಾದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಗುರು ಸ್ಥಾನದಲ್ಲಿ ನಿಂತು ಪುತ್ತಿಗೆ ಶ್ರೀಗಳನ್ನು ಕಳೆದ ವರ್ಷ ಜ.18ರಂದು ಕೃಷ್ಣ ಮಠದಲ್ಲಿರುವ ಸರ್ವಜ್ಞ ಪೀಠದಲ್ಲಿ ಕೂರಿಸುವ ಮೂಲಕ ಪರ್ಯಾಯ ಸೇವೆಗೆ ಅವಕಾಶ ಒದಗಿಸಿದ್ದರು. ಈ ವೇಳೆ ಸುಗುಣೇಂದ್ರ ಶ್ರೀಗಳು, ತಮ್ಮ ಚತುರ್ಥ ಪರ್ಯಾಯವನ್ನು ವಿಶ್ವ ಗೀತಾ ಪರ್ಯಾಯ ಎಂದು ಘೋಷಿಸಿದ್ದರು. ತಮ್ಮ ಒಂದನೇ ಪರ್ಯಾಯದಿಂದ 4ನೇ ಪರ್ಯಾಯದ ವರೆಗೂ ಸಹ ವಿಶ್ವಪ್ರಿಯ ತೀರ್ಥರು ಜತೆಯಾಗಿದ್ದು ಸಹಕರಿಸಿದ್ದು, 5ನೇ ಪರ್ಯಾಯಕ್ಕೂ ಅವರ ಸಹಯೋಗ ಲಭಿಸುವಂತಾಗಬೇಕು ಎಂದು ಆಶಿಸಿದ್ದರು. ಅದಮಾರು ಶ್ರೀ ಮಾತನಾಡಿ, ವಾದಿರಾಜರು ಪ್ರತಿಷ್ಠೆ ಮಾಡಿರುವಂತಹ ಉಡುಪಿಯ ಪ್ರಾಣದೇವರು ಪುತ್ತಿಗೆ ಶ್ರೀಗಳಲ್ಲಿ ಇದ್ದುಕೊಂಡು 2ನೇ ವರ್ಷದ ಪರ್ಯಾಯ ನಿರ್ವಿಘ್ನವಾಗಿ ನಡೆಯಲಿ. ದೇಶಕ್ಕೆ ಕ್ಷೇಮವಾಗಲಿ. ಭಾರತ ವಿಶ್ವಗುರು ಸ್ಥಾನ ಅಲಂಕರಿಸುವಂತಾಗಲಿ ಎಂದು ಆಶೀರ್ವದಿಸಿದ್ದರು.