ಮೊದಲ ವಿಶ್ವಕಪ್ ಗೆಲುವಿಗೆ 1 ಲಕ್ಷ ಪೌಂಡ್ ಬಹುಮಾನ!

ಏಕದಿನ ವಿಶ್ವಕಪ್ ಟೂರ್ನಿಯ 12ನೇ ಆವೃತ್ತಿಯ ಬಹುಮಾನ ಮೊತ್ತವನ್ನು ಐಸಿಸಿ ಪ್ರಕಟಿಸಿದೆ. 10 ದಶಲಕ್ಷ ಯುಎಸ್ ಡಾಲರ್​ನಲ್ಲಿ ಅಂದರೆ ಅಂದಾಜು 70 ಕೋಟಿ ರೂ. ಬಹುಮಾನದಲ್ಲಿ ಈ ಬಾರಿಯ ಆವೃತ್ತಿ ನಡೆಯಲಿದೆ. ಹಾಗಿದ್ದಲ್ಲಿ ಮೊದಲ ಆವೃತ್ತಿಯ ವಿಶ್ವಕಪ್​ನಲ್ಲಿ ಇದ್ದ ಬಹುಮಾನ ಮೊತ್ತವೆಷ್ಟು ಎನ್ನುವ ಕುತೂಹಲ ಎಲ್ಲರಲ್ಲಿ ಏಳುವುದು ಸಹಜ. ಖ್ಯಾತ ಅಂಕಿ-ಅಂಶ ತಜ್ಞ ಮೋಹನ್​ದಾಸ್ ಮೆನನ್ ನೀಡಿರುವ ಮಾಹಿತಿ ಪ್ರಕಾರ ಮೊದಲ ಆವೃತ್ತಿಯ ವಿಶ್ವಕಪ್​ನಲ್ಲಿ 1 ಲಕ್ಷ ಪೌಂಡ್ (ಈಗಿನ ಲೆಕ್ಕಾಚಾರದ ಪ್ರಕಾರ 89 ಲಕ್ಷ ರೂ. ) ಬಹುಮಾನ ಮೊತ್ತವಿತ್ತು.

ವಿಜೇತ ತಂಡಕ್ಕೆ 4 ಸಾವಿರ ಪೌಂಡ್, ರನ್ನರ್​ಅಪ್ ತಂಡಕ್ಕೆ 2 ಸಾವಿರ ಪೌಂಡ್ ಹಾಗೂ ಸೆಮಿಫೈನಲಿಸ್ಟ್ ತಂಡಕ್ಕೆ ತಲಾ 1 ಸಾವಿರ ಪೌಂಡ್ ಬಹುಮಾನ ನೀಡಲಾಗಿತ್ತು. ಪ್ರಸ್ತುತ ದಿನಗಳಿಗೆ ಈ ಮೊತ್ತವನ್ನು ಹೋಲಿಕೆ ಮಾಡುವುದು ಕಷ್ಟವಾದರೂ, ಅಂದಿನ ದಿನಗಳಲ್ಲಿ ಬಹುಮಾನ ಮೊತ್ತದ ಹೆಚ್ಚಿನ ಹಣ ಆಯಾ ತಂಡಗಳ ಪ್ರಯಾಣಕ್ಕಾಗಿಯೇ ಖರ್ಚಾಗುತ್ತಿದ್ದವು.

ಇನ್ನು ವಿವಿಧ ಟೂರ್ನಿಗಳ ಬಹುಮಾನ ಮೊತ್ತಕ್ಕೆ ವಿಶ್ವಕಪ್​ನ ಹಣವನ್ನು ಹೋಲಿಕೆ ಮಾಡುವುದಾದರೆ, ಫುಟ್​ಬಾಲ್ ವಿಶ್ವಕಪ್​ನಲ್ಲಿ ಕೊನೇ ಅಂದರೆ 32ನೇ ಸ್ಥಾನ ಪಡೆಯಲಿರುವ ತಂಡ ವಿಶ್ವಕಪ್​ನ ಚಾಂಪಿಯನ್ ತಂಡಕ್ಕಿಂತ ದುಪ್ಪಟ್ಟು ಹಣವನ್ನು ಬಹುಮಾನವಾಗಿ ಪಡೆಯುತ್ತದೆ! ಇನ್ನು ಪ್ರತಿ ವರ್ಷ ನಡೆಯುವ ಐಪಿಎಲ್​ನಲ್ಲಿ ಚಾಂಪಿಯನ್ ತಂಡ 20 ಕೋಟಿ ಗೆದ್ದರೆ, ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್​ನಲ್ಲಿ ಚಾಂಪಿಯನ್ ತಂಡ 28 ಕೋಟಿ ರೂ. ಪಡೆಯುವುದು ವಿಚಿತ್ರವೆನಿಸುತ್ತದೆ.

Leave a Reply

Your email address will not be published. Required fields are marked *