ಚಿಕ್ಕಬಳ್ಳಾಪುರ: ಕ್ಷೇತ್ರದ ಕಾಂಗ್ರೆಸ್ ನಲ್ಲಿ ಭಿನ್ನಮತದ ಸಮರದ ನಡುವೆ ಬೆಂಬಲಿಗರು ಶಾಸಕ ಪ್ರದಿಪ್ ಈಶ್ವರ್ ಗೆ ಸಚಿವ ಸ್ಥಾನಕ್ಕೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಶೈಕ್ಷಣಿಕ ಕ್ರಾಂತಿಯ ಸಾಮರ್ಥ್ಯದ ಪ್ರತಿಭೆ, ಯುವ ನಾಯಕರಿಗೆ ಆದ್ಯತೆ, ಏಕೈಕ ಬಲಿಜ ಸಮುದಾಯದ ಶಾಸಕ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನೀಡಬೇಕು. ಇದಕ್ಕೆ ವರಿಷ್ಠರ ಮೇಲೆ ಒತ್ತಡ ಹೇರುವುದಾಗಿ ಹೇಳುತ್ತಿದ್ದಾರೆ. ಇದರ ನಡುವೆ ನಿಷ್ಠಾವಂತ ಬೆಂಬಲಿಗರ ಕೂಗಿಗೆ ಅನುಗುಣವಾಗಿ ಪ್ರದಿಪ್ ಈಶ್ವರ್ ಸಹ ಒಳಗೊಳಗೆ ಕಸರತ್ತು ನಡೆಸುತ್ತಿದ್ದಾರೆ. ಹಾಲಿ ಸಚಿವ ಡಾ ಎಂ.ಸಿ.ಸುಧಾಕರ್ಗೆ ಕೊಕ್ ನೀಡಲಾಗುತ್ತದೆ. ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಕೊನೆ ಕ್ಷಣದಲ್ಲಿ ಕೈ ತಪ್ಪಲಿದ್ದು ಬಲಿಜ ಸಮುದಾಯದ ಖೋಟಾದಡಿ ಸಚಿವ ಸ್ಥಾನಮಾನ ಸಿಗಲಿದೆ ಎಂಬ ಚರ್ಚೆಯನ್ನು ಹುಟ್ಟು ಹಾಕಲಾಗಿದೆ. ಇನ್ನು ನಾಲ್ಕೆ$ದು ಬಾರಿ ಶಾಸಕರಾಗಿ ಆಯ್ಕೆಯಾದವರನ್ನು ಸಚಿವರನ್ನಾಗಿಸಿಲ್ಲ. ಇನ್ನು ಮೊದಲ ಬಾರಿ ಗೆದ್ದಿರುವವರಿಗೆ ಪರಿಗಣಿಸುವುದು ಕಷ್ಟ ಎಂಬುದನ್ನು ಸ್ವತ: ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

*ಸಚಿವ ಸ್ಥಾನಕ್ಕೆ ಪೈಪೋಟಿ
ಹಿರಿಯ ಶಾಸಕರ ಕೋಟಾದಡಿ ಸಚಿವ ಸ್ಥಾನಕ್ಕೆ ಪೈಪೋಟಿ ಉಂಟಾಗಿದೆ. ಮೂರು ಬಾರಿ ಆಯ್ಕೆಯಾಗಿರುವ ಡಾ ಎಂ.ಸಿ.ಸುಧಾಕರ್ ಪ್ರಸ್ತುತ ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ನಡುವೆ ಸಚಿವ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಅವಕಾಶ ಸಿಗಲಿದೆ ಎಂದೇಳಲಾಗುತ್ತಿದೆ. ಈ ಇಬ್ಬರ ಪೈಪೋಟಿಯ ಸಂದರ್ಭದಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಶಾಸಕ ಪ್ರದೀಪ್ ಈಶ್ವರ್ ಹೆಸರನ್ನು ಕಾಂಗ್ರೆಸ್ ಪಾಳಯದಲ್ಲಿನ ಅವರ ಬೆಂಬಲಿಗರು ಚರ್ಚಿಸುತ್ತಿದ್ದಾರೆ. ಪ್ರದೀಪ್ ಈಶ್ವರ್ ಮಾತ್ರ ಮೇಲ್ನೋಟಕ್ಕೆ ನಿರಾಕರಿಸುತ್ತಿದ್ದಾರೆ.