ಮೊದಲು ಮಂದಿರ, ನಂತರ ಸರ್ಕಾರ: ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ

ಮುಂಬೈ: ಮುಂದಿನ ಲೋಕಸಭೆ ಚುನಾವಣೆಗೆ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ರಾಮಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡುವಂಥ ನೂತನ ಘೋಷಣೆಯನ್ನು ಹೊರಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮೊದಲು ಮಂದಿರ, ನಂತರ ಸರ್ಕಾರ. ಇದು ಎಲ್ಲ ಹಿಂದುಗಳ ಬೇಡಿಕೆ. ಹಾಗಾಗಿ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಬೇಕು” ಎಂದರು.

ಇದೇ ನಿಟ್ಟಿನಲ್ಲಿ ನವೆಂಬರ್​ 24, 25ರಂದು ಉದ್ಧವ್​ ಠಾಕ್ರೆ ಅಯೊಧ್ಯೆಗೆ ಭೇಟಿ ನೀಡಲಿದ್ದು, ಈ ಕುರಿತು ಚರ್ಚೆ ನಡೆಸಲು ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಲಿದ್ದಾರೆ. ಮಹಾರಾಷ್ಟ್ರದಿಂದ ಹೊರಗಿರುವ ಶಿವಸೇನಾ ನಾಯಕರೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಶಿವಸೇನಾ ಕಾರ್ಯಕರ್ತರು ನವೆಂಬರ್ 24ರಂದು ದೇಶಾದ್ಯಂತ ಮಹಾ ಆರತಿ ಪೂಜೆ ಕೈಗೊಳ್ಳುವಂತೆ ಠಾಕ್ರೆ ಸೂಚಿಸಿದ್ದು, ಅದೇ ದಿನ ಠಾಕ್ರೆ ಅಯೋಧ್ಯೆಯಲ್ಲಿ ಸರಯೂ ಪೂಜೆ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿದ್ದರೂ ರಾಮಮಂದಿರ ನಿರ್ಮಾಣ ಮಾಡದಿರುವುದು ಕೇಸರಿ ಪಕ್ಷದ ವೈಫಲ್ಯ. ವೈಫಲ್ಯವನ್ನು ಎತ್ತಿ ತೋರಿಸಲು ಬಿಜೆಪಿ ದಸರಾದಂದು ಬೃಹತ್​ ಮೆರವಣಿಗೆ ಆಯೋಜಿಸಿತ್ತು ಎಂದು ಶಿವಸೇನೆ ವಿರೋಧ ವ್ಯಕ್ತಪಡಿಸಿತ್ತು. (ಏಜೆನ್ಸೀಸ್)

Comments are closed.