ಮೊದಲ ಮಳೆಗೆ ಮೈದುಂಬಿ ಹಿಡಕಲ್ ಜಲಾಶಯ ದಾಖಲೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಿಡಕಲ್ ಜಲಾಶಯ ಆಗಸ್ಟ್ ಮೊದಲ ವಾರದಲ್ಲಿಯೇ ಭರ್ತಿಯಾಗಿದೆ. ಹಿಡಕಲ್ ಜಲಾಶಯದ ಗರಿಷ್ಠ ಮಟ್ಟ 2,175 ಅಡಿಗಳಿದ್ದು, ಆಗಸ್ಟ್ 2 ಕ್ಕೆ ಜಲಾಶಯದ ಮಟ್ಟ 2,172.13 ಅಡಿ ತಲುಪಿದೆ.ಭರ್ತಿ ಆಗಲು ಇನ್ನು 2.87 ಅಡಿ ಬಾಕಿ ಇದೆ.
ಮಳೆ ಎಡೆಬಿಡದೇ ಸುರಿಯುತ್ತಿದೆ.ಜಲಾಶಯ ಸಂಪೂರ್ಣ ಭರ್ತಿಗೆ ದಿನಗಣನೆ ಆರಂಭವಾದಾಗಲೇ ನೀರು ಹೊರ ಬಿಡಲಾಗುತ್ತಿದೆ. ಹಾಗಾಗಿ ಜಲಾಶಯ ಸಂಪೂರ್ಣ ಭರ್ತಿ ಆದ ಲೆಕ್ಕವೇ ಎನ್ನುತ್ತಿದ್ದಾರೆ ಅಧಿಕಾರಿಗಳು. ಕಳೆದ ನಾಲ್ಕು ವರ್ಷಗಳಲ್ಲಿ ಎಂದೂ ಪೂರ್ಣ ಪ್ರಮಾಣದಲ್ಲಿ ಹಿಡಕಲ್ ಜಲಾಶಯ ಭರ್ತಿಯಾಗಿಲ್ಲ. ಈ ಬಾರಿ ಜಲಾಶಯ ಮೈದುಂಬಿಕೊಂಡಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಆಗಸ್ಟ್ ಮೊದಲ ವಾರದಲ್ಲಿಯೇ ಭರ್ತಿಯಾಗುವ ಮೂಲಕ ಹಿಡಕಲ್ ಜಲಾಶಯ ಹೊಸ ದಾಖಲೆ ಬರೆದಿದೆ.

ಜಲಾಶಯ ಪರಿಚಯ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ಘಟಪ್ರಭಾ ನದಿಗೆ ನಿರ್ಮಿಸಲಾದ ಹಿಡಕಲ್ ಜಲಾಶಯವನ್ನು ಘಟಪ್ರಭಾ ಜಲಾಶಯ/ ರಾಜ ಲಖಮಗೌಡ ಜಲಾಶಯ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. 1977 ರಲ್ಲಿ ಈ ಜಲಾಶಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಅಲ್ಲಿಂದ ಇಲ್ಲಿಯವರೆಗೆ 41 ವರ್ಷಗಳಲ್ಲಿ ಕೇವಲ 17 ಬಾರಿ ಮಾತ್ರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸಾಮಾನ್ಯವಾಗಿ ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ ಈ ಬಾರಿ ಆಗಸ್ಟ್ ಮೊದಲ ವಾರದಲ್ಲಿಯೇ ಭರ್ತಿಯಾಗುತ್ತಿದೆ. ನೆರೆಯ ಮಹಾರಾಷ್ಟ್ರದ ಪ್ರದೇಶದಲ್ಲಿ ಚೆನ್ನಾಗಿ ಮಳೆಯಾಗುತ್ತಿರುವುದರಿಂದ ಹಿಡಕಲ್ ಜಲಾಶಯ ಭರ್ತಿಯಾಗಿದೆ.

ರೈತರಿಗೆ ಹರುಷ: ಹಿಡಕಲ್ ಜಲಾಶಯ ಭರ್ತಿಯಾಗಿರುವುದರಿಂದ ಮುಂಗಾರು ಬೆಳೆ ಬೆಳೆಯುವ ಈ ಭಾಗದ ಕೃಷಿಕರ ಮೊಗದಲ್ಲಿ ಹರುಷ ಮೂಡಿದೆ. ಹಿಡಕಲ್ ಜಲಾಶಯದಿಂದ ಬೆಳಗಾವಿ, ಹುಕ್ಕೇರಿ, ಸಂಕೇಶ್ವರ, ಮುಧೋಳ, ಜಮಖಂಡಿ, ಬಾಗಲಕೋಟ ಭಾಗದ ರೈತರ ಕೃಷಿಗೆ ಅನುಕೂಲವಾಗುತ್ತದೆ. ಜನತೆಗೆ ಕುಡಿಯುವ ನೀರು ಲಭ್ಯವಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಹಿಡಕಲ್ ಜಲಾಶಯ ಭರ್ತಿಯಾಗದ ಕಾರಣ ಮುಂಗಾರು ಬೆಳೆ ಬೆಳೆಯುವ ಕೃಷಿಕರಿಗೆ ತೊಂದರೆಯಾಗಿತ್ತು. ಕಳೆದ ನಾಲ್ಕು ವರ್ಷದಲ್ಲಿ ಖರೀಫ್ ಸೀಸನ್‌ನಲ್ಲಿ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಿರಲಿಲ್ಲ. ಈ ಬಾರಿ ಕಳೆದ ಒಂದು ತಿಂಗಳಿನಿಂದ ಕಾಲುವೆ ಮೂಲಕ ಮುಂಗಾರು ಬೆಳೆ ಬೆಳೆಯುತ್ತಿರುವ ರೈತರಿಗೆ ಅನುಕೂಲವಾಗುವಂತೆ ನೀರು ಬಿಡಲಾಗುತ್ತಿದೆ. ಹೀಗಾಗಿ ಮುಂಗಾರು ಬೆಳೆಗೆ ಈ ಬಾರಿ ಹಿಡಕಲ್ ಜಲಾಶಯದಿಂದ ಭರ್ತಿ ನೀರು ಲಭ್ಯವಾಗಲಿದೆ.

ದಾಖಲೆ ನೀರು ಸಂಗ್ರಹ

ಕಳೆದ ವರ್ಷ ಆಗಸ್ಟ್ 2 ರಂದು ಜಲಾಶಯದಲ್ಲಿ 2147.23 ಅಡಿಗಳಷ್ಟು ನೀರಿನ ಸಂಗ್ರಹವಿದ್ದರೆ, ಈ ಬಾರಿ 2172.13 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹಿಡಕಲ್ ಜಲಾಶಯದ ಒಟ್ಟಾರೆ ನೀರಿನ ಸಂಗ್ರಹ ಸಾಮರ್ಥ್ಯ 48.98 ಟಿಎಂಸಿ ಆಗಿದ್ದು, ಈಗಾಗಲೇ ಜಲಾಶಯದಲ್ಲಿ 46.78 ಟಿಎಂಸಿ ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ಅವಧಿಗೆ ಕೇವಲ 29.16 ಟಿಎಂಸಿ ನೀರಿನ ಸಂಗ್ರಹವಿತ್ತು. ಜೂನ್ 1 ರಿಂದ ಇಲ್ಲಿಯವರೆಗೆ 45773 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ. 4071 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ.

ಹಿಂಗಾರು ಬೆಳೆಗೆ ಸಮೃದ್ಧ ನೀರು

ಕಳೆದ ಕೆಲ ವರ್ಷಗಳಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಪ್ರತಿ ವರ್ಷ ಅಕ್ಟೋಬರ್ ನಂತರ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಸಲಹಾ ಸಮಿತಿಯು ಶಾಸಕರ ಸಲಹೆ ಪಡೆದು ಹಿಡಕಲ್ ಜಲಾಶಯದಿಂದ ರೈತರ ಕೃಷಿ ಭೂಮಿಗೆ ಕಾಲುವೆ ಮೂಲಕ ಯಾವ ಪ್ರಮಾಣದಲ್ಲಿ ನೀರು ಬಿಡಬೇಕು ಎಂದು ಯೋಜನಾ ಬದ್ಧವಾಗಿ ನೀರಿನ ನಿರ್ವಹಣೆ ಮಾಡುತ್ತ ಬಂದಿದೆ. ಈ ಬಾರಿ ಜಲಾಶಯ ಭರ್ತಿ ಆಗುವುದರಿಂದ ಅಕ್ಟೋಬರ್ ನಂತರ ಪ್ರಾರಂಭವಾಗುವ ಹಿಂಗಾರು ಬೆಳೆಗೆ ಕೂಡ ಸಾಕಷ್ಟು ಪ್ರಮಾಣದ ನೀರು ಲಭ್ಯವಾಗಲಿದೆ.
ಮಲಪ್ರಭಾ ಜಲಾಶಯಕ್ಕೆ ದುಪ್ಪಟ್ಟು ನೀರು: ಜಿಲ್ಲೆಯ ಇನ್ನೊಂದು ಪ್ರಮುಖ ಜಲಾಶಯವಾದ ಮಲಪ್ರಭಾ ಜಲಾಶಯದಲ್ಲಿ ಕೂಡ ಕಳೆದ ಬಾರಿಗಿಂತ ದುಪ್ಪಟ್ಟು ನೀರಿನ ಸಂಗ್ರಹವಾಗಿದೆ. ಮಲಪ್ರಭಾ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನಕ್ಕೆ 8.65 ಟಿಎಂಸಿ ನೀರಿನ ಸಂಗ್ರಹವಿದ್ದರೆ, ಈ ಬಾರಿ 16.02 ಟಿಎಂಸಿ ನೀರಿನ ಸಂಗ್ರಹವಾಗಿದೆ. ನೀರಿನ ಮಟ್ಟ ಕಳೆದ ಬಾರಿ 2053.80 ಅಡಿಗಳಿದ್ದರೆ, ಈ ಬಾರಿ 2063.35 ಅಡಿ ಇದೆ. ಆದರೆ ಜಲಾಶಯ ಅರ್ಧವಷ್ಟೇ ಭರ್ತಿ ಆಗಿದೆ.