ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ: ಸಂಜೆ 5ರ ವರೆಗೆ ಶೇ. 61.94 ಮತದಾನ

ಬೆಂಗಳೂರು: ರಾಜ್ಯದ 14 ಲೋಕಸಭೆ ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ಸಂಜೆ 5 ಗಂಟೆಯವರೆಗೆ ಶೇ. 61.94 ಮತದಾನವಾಗಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ಬಹುತೇಕ ಕಡೆ ಮತದಾನ ಶಾಂತಿಯುತವಾಗಿ ನಡೆದಿದೆ. ಕೆಲವೆಡೆ ಮತಯಂತ್ರಗಳಲ್ಲಿ ದೋಷ ಕಂಡು ಬಂದಿತ್ತು, ಚುನಾವಣೆ ಅಧಿಕಾರಿಗಳು ದೋಷವನ್ನು ಸರಿಪಡಿಸಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ವ್ಯವಸ್ಥೆ ಮಾಡಿಕೊಟ್ಟರು.

ಸಂಜೆ 5 ಗಂಟೆಯವರೆಗೆ ಉಡುಪಿ ಚಿಕ್ಕಮಗಳೂರಿನಲ್ಲಿ ಶೇ. 69.83, ಹಾಸನ ಶೇ. 71.20, ದಕ್ಷಿಣ ಕನ್ನಡ ಶೇ. 72.97, ಚಿತ್ರದುರ್ಗ, ಶೇ. 61.75, ತುಮಕೂರು, ಶೇ. 70.28, ಮಂಡ್ಯ ಶೇ. 70.23, ಮೈಸೂರಿನಲ್ಲಿ ಶೇ. 61.32, ಚಾಮರಾಜನಗರದಲ್ಲಿ ಶೇ. 66.51, ಬೆಂಗಳೂರು ಗ್ರಾಮಾಂತರದಲ್ಲಿ ಶೇ. 57.43, ಬೆಂಗಳೂರು ಉತ್ತರ ಶೇ. 48.19, ಬೆಂಗಳೂರು ಸೆಂಟ್ರಲ್​ ಶೇ. 45.34, ಬೆಂಗಳೂರು ದಕ್ಷಿಣ ಶೇ. 49.36, ಚಿಕ್ಕಬಳ್ಳಾಪುರದಲ್ಲಿ ಶೇ. 69.33, ಕೋಲಾರದಲ್ಲಿ ಶೇ. 69.99ರಷ್ಟು ಮತದಾನವಾಗಿದೆ. ರಾತ್ರಿ ವೇಳೆಗೆ ಮತದಾನದ ನಿಖರ ವಿವರ ಲಭ್ಯವಾಗಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳವಳ್ಳಿಯಲ್ಲಿ ಮತಗಟ್ಟೆ​ ಏಜೆಂಟ್​ ಮೇಲೆ ಹಲ್ಲೆ

ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಬೆಳಗ್ಗೆ ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅದರ ಬೆನ್ನಲ್ಲೇ ಮಳವಳ್ಳಿ ವಿಧಾನಸಭೆ ಕ್ಷೇತ್ರದ ಬಸವನಪುರದಲ್ಲಿ ಸುಮಲತಾ ಅಂಬರೀಷ್​ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ಸುಮಲತಾ ಪರ ಇದ್ದ ಪೋಲಿಂಗ್ ಏಜೆಂಟ್ ಚನ್ನಬಸವಣ್ಣ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ.

ಸಿಲಿಕಾನ್​ ಸಿಟಿಯಲ್ಲಿ ನೀರಸ ಪ್ರತಿಕ್ರಿಯೆ

ಯುವಜನತೆ ಮತ್ತು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಚುನಾವಣೆ ಆಯೋಗ ಸಾಕಷ್ಟು ಪ್ರಚಾರ ನಡೆಸಿತ್ತು. ಇದರ ಹೊರತಾಗಿಯೂ ಬೆಂಗಳೂರಿನಲ್ಲಿ ಯುವಜನತೆ ಮತ್ತು ಹೊಸ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಸುಳಿಯಲಿಲ್ಲ. ಬಹುತೇಕ ಕಡೆಗಳಲ್ಲಿ ಹಿರಿಯ ನಾಗರಿಕರು ಉತ್ಸಾಹದಿಂದ ಮತ ಚಲಾಯಿಸಿದರು.

ಗಣ್ಯರು, ಸೆಲೆಬ್ರಿಟಿಗಳಿಂದ ಮತದಾನ, ಅರಿವು

ಕಣದಲ್ಲಿದ್ದ ಅಭ್ಯರ್ಥಿಗಳು, ಸಚಿವರು, ಶಾಸಕರು, ಸ್ವಾಮೀಜಿಗಳು, ಸಿನಿಮಾ ನಟರು ಬೆಳಗ್ಗೆಯಿಂದಲೇ ಸರದಿಯ ಸಾಲಿನಲ್ಲಿ ನಿಂತು ಮತದಾನ ಮಾಡಿ ಸಂಭ್ರಮಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಮತದಾನ ಮಾಡಿದ ಕುರುಹಾಗಿ ತಮ್ಮ ಭಾವಚಿತ್ರಗಳನ್ನು ಅಪ್ಲೋಡ್ ಮಾಡಿ, ಮಾಧ್ಯಮಗಳಿಗೆ ಸಂದೇಶ ನೀಡಿ ಮತದಾನಕ್ಕೆ ಹುರಿದುಂಬಿಸಿದರು. ಶತಾಯುಷಿ ಸಾಲುಮರದ ತಿಮ್ಮಕ್ಕ ಸೇರಿದಂತೆ ಹಿರಿಯ ನಾಗರಿಕರು, ಅಂಗವಿಕಲರು ಮಕ್ಕಳು, ಮೊಮ್ಮಕ್ಕಳ ನೆರವಿನೊಂದಿಗೆ ಮತ ಚಲಾಯಿಸಿ ಕಿರಿಯರಿಗೆ ಸ್ಫೂರ್ತಿ ತುಂಬಿದರು. ತಮ್ಮ ಹಕ್ಕು ಚಲಾಯಿಸಿ ರಜೆಯ ಮಜಾ ಅನುಭವಿಸಲು ತೆರಳಿದರು. ಬೆಂಗಳೂರಿನಲ್ಲಿರುವ ಕೆಲವರು ತಮ್ಮ ಊರುಗಳಿಗೆ ತೆರಳಿ ಮತದಾನ ಮಾಡದೆ ನಿರ್ಲಕ್ಷ್ಯ ತೋರಿದ್ದು ಬೇಸರಕ್ಕೆ ಕಾರಣವಾಯಿತು.

ಮತಯಂತ್ರದಲ್ಲಿ ಪವಡಿಸಿದ ಅಭ್ಯರ್ಥಿಗಳ ಭವಿಷ್ಯ

ಇಂದು ಮತದಾನ ನಡೆದ 14 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ಮತಯಂತ್ರದಲ್ಲಿ ಭದ್ರವಾಗಿದೆ. ರಾಜ್ಯದ 2ನೇ ಹಂತದ ಮತದಾನ ಏ.23ರಂದು ನಡೆಯಲಿದ್ದು ಅಂದು 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಒಟ್ಟು ಏಳು ಹಂತದಲ್ಲಿ ದೇಶಾದ್ಯಂತ ಮತದಾನ ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಅಂದು ಯಾರ ಕೊರಳಿಗೆ ಜಯಮಾಲೆ ಎಂಬುದು ಬಹಿರಂಗವಾಗಲಿದೆ.

Leave a Reply

Your email address will not be published. Required fields are marked *