ತುಕ್ಕು ಹಿಡಿದ ಆಡಳಿತಕ್ಕೆ ಸಾಣೆ ಹಿಡಿಯುವ ಕೆಲಸ

ಚಿಕ್ಕಮಗಳೂರು: ರಾಜ್ಯದಲ್ಲಿಯೇ ಮೊದಲ ಬಾರಿಗೆ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ ತರೀಕೆರೆ ತಾಲೂಕು ದೋರನಾಳು ಗ್ರಾಮದಲ್ಲಿ ಮಂಗಳವಾರ ಆರಂಭಿಸಿರುವ ಜಿಲ್ಲಾ ಪಂಚಾಯಿತಿ ತುಕ್ಕು ಹಿಡಿದ ಆಡಳಿತಕ್ಕೆ ಸಾಣೆ ಹಿಡಿಯುವ ಕೆಲಸ ಮಾಡಿತು.

ಅಧಿಕಾರಿ, ನೌಕರ ಶಾಹಿ ವಿಳಂಬ ಧೋರಣೆಯಿಂದ ಬೇಸತ್ತು ಸರ್ಕಾರಿ ಕಚೇರಿಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದ ಸಾವಿರಾರು ಜನರು ಸಭೆಯಲ್ಲಿ ಭಾಗವಹಿಸಿ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹಾಗೂ ಜಿಪಂ ಸಿಇಒ ಸಿ.ಸತ್ಯಭಾಮಾ ಅವರಿಗೆ ನೇರವಾಗಿ ಅಹವಾಲು ಸಲ್ಲಿಸಿದರು.

ವಿನೂತನವಾಗಿ ಆರಂಭವಾಗಿರುವ ಜನ ಸಂಪರ್ಕ ಸಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು ಸಮಸ್ಯೆಗಳನ್ನು ನೇರವಾಗಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಬಹುತೇಕ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಅರ್ಜಿದಾರನ ಸಮಸ್ಯೆಗೆ ಸ್ಪಂದಿಸಲಾಯಿತು.

ಜಮೀನು ಒತ್ತುವರಿ ತೆರವು, ನಿವೇಶನ ಬೇಡಿಕೆ, ಸಾಗುವಳಿ ಚೀಟಿ ಕೊಡುವುದು, ಶುದ್ಧ ಗಂಗಾ ಘಟಕ ಸ್ಥಾಪನೆ, ತರೀಕೆರೆಯಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ, ರಸ್ತೆ ಕಾಮಗಾರಿಗಳು, ಗ್ರಾಮಗಳ ಚರಂಡಿ ಸ್ವಚ್ಛತೆ, ಕಲ್ಲತ್ತಗಿರಿಯಿಂದ ಕೆರೆ ತುಂಬಿಸುವುದು ಸೇರಿ ಅನೇಕ ಬೇಡಿಕೆಗಳ ಮಹಾಪೂರವೇ ಜನರಿಂದ ಹರಿದುಬಂದವು.

ಬೆಳಗ್ಗೆ 10.30ಕ್ಕೆ ಗ್ರಾಮಕ್ಕೆ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ, ಜಿಪಂ ಸಿಇಒ 11ಕ್ಕೆ ಕಾರ್ಯಕ್ರಮ ಉದ್ಘಾಟಿಸಿ ನಂತರ ನೇರವಾಗಿ ಅಹವಾಲು ಸ್ವೀಕಾರ ಮಾಡಲಾರಂಭಿಸಿದರು. ಅರ್ಜಿ ಸ್ವೀಕರಿಸಲು 20ಕ್ಕೂ ಹೆಚ್ಚು ನೌಕರರನ್ನು ನಿಯೋಜಿಸಲಾಗಿತ್ತು. ಮುದ್ರಿತ ಅರ್ಜಿಗಳನ್ನು ಸಾರ್ವಜನಿಕರಿಗೆ ನೀಡಿ ಅವರಿಂದ ಸ್ವ ವಿಳಾಸ, ಮೊಬೈಲ್ ನಂಬರ್, ಸಮಸ್ಯೆಯ ವಿವರ, ಅಗತ್ಯ ದಾಖಲೆಗಳನ್ನು ಪಡೆಯಲಾಗುತ್ತಿತ್ತು. ಓದು-ಬರಹ ಬಾರದಿದ್ದವರಿಗೆ ಸಹಾಯಕರು ಅರ್ಜಿ ಬರೆದುಕೊಡುತ್ತಿದ್ದರು.

ಬೆಳಗ್ಗೆ 11ರಿಂದ ಸಂಜೆ 6ರ ತನಕ ಪ್ರತಿ ಅರ್ಜಿದಾರರನ್ನೂ ಪ್ರತ್ಯೇಕವಾಗಿ ಮಾತನಾಡಿಸಿ ಅವರ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಆಲಿಸುತ್ತಿದ್ದರು. ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಂದ ಅರ್ಜಿದಾರನಿಗೆ ವಿವರಣೆ ಕೊಡಿಸುತ್ತಿದ್ದರು. ಕೆಲ ಅರ್ಜಿಗಳಿಗೆ ಈ ರೀತಿಯಾಗಿ ಅವರ ಕೆಲಸ ಮಾಡಿಕೊಡಿ ಎಂದು ಡಿಸಿ ಸೂಚನೆ ನೀಡಿದರು.

ಎಲ್ಲದಕ್ಕೂ ಸರ್ಕಾರವನ್ನು ಆಶ್ರಯಿಸಬೇಡಿ: ಗ್ರಾಮದ ಎಲ್ಲ ಕೆಲಸ ಕಾರ್ಯಗಳಿಗೂ ಸರ್ಕಾರನ್ನು ಆಶ್ರಯಿಸಬಾರದು ಎಂದು ಗ್ರಾಮೀಣರಿಗೆ ಸಲಹೆ ನೀಡಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಶ್ರಮದಾನದ ಮೂಲಕ ಗ್ರಾಮ ನೈರ್ಮಲ್ಯ ಕಾಪಾಡಲು ಮುಂದಾಗುವಂತೆ ಸಲಹೆ ನೀಡಿದರು.

ಚರಂಡಿ, ರಸ್ತೆ ಸ್ವಚ್ಛತೆಗೂ ಗ್ರಾಪಂ ಆಶ್ರಯಿಸುವುದು ಅಷ್ಟೊಂದು ಸೂಕ್ತವಲ್ಲ. ಗ್ರಾಮದಲ್ಲಿರುವ ಸ್ವ ಸಹಾಯ ಸಂಘ, ಯುವಕ ಸಂಘ, ಸ್ತ್ರೀಶಕ್ತಿಗಳ ಮೂಲಕ ಪಿಡಿಒಗಳು, ಸದಸ್ಯರು ಗ್ರಾಮ ಸ್ವಚ್ಛತೆ ಮಾಡಬೇಕು. ಅ.2ರಿಂದ ಒಂದು ತಿಂಗಳು ನೈರ್ಮಲ್ಯ ಸಪ್ತಾಹ ಮಾಸಾಚರಣೆ ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಕೈಜೊಡಿಸಬೇಕೆಂದು ಮನವಿ ಮಾಡಿದರು.

ಕಲ್ಲು ಗಣಿಗಾರಿಕೆ ನಿಲ್ಲಿಸಲು ಆಗ್ರಹ:  ತರೀಕೆರೆ ತಾಲೂಕಿನ ಬೇಲೇನಹಳ್ಳಿಯಲ್ಲಿ ಸ್ಪೋಟಕ ಬಳಸಿ ಮಾಡುತ್ತಿರುವ ಕಲ್ಲು ಗಣಿಗಾರಿಕೆ ಮುಚ್ಚಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಕಲ್ಲು ಗಣಿಗಾರಿಕೆ ಸ್ಪೋಟದಿಂದ ಗ್ರಾಮದ ಅನೇಕ ಮನೆಗಳು ಶಿಥಿಲಗೊಂಡಿವೆ. ಈ ಭಾಗದ ಅಂತರ್ಜಲ ಕುಸಿತಗೊಂಡಿದ್ದು, ನೀರಿಗೂ ತತ್ವಾರವಾಗಿದೆ. ಬೋರ್​ವೆಲ್ ಲಾರಿ ಮೂಲಕ ಕೊಳವೆ ಕೊರೆದು ಅದರಲ್ಲಿ ಮದ್ದು ತುಂಬಿ ಬ್ಲಾಸ್ಟ್ ಮಾಡಲಾಗುತ್ತಿದೆ. ಇದರಿಂದ ಭೂಮಿ ನಡುಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸುರಕ್ಷಿತ ವಲಯದಲ್ಲಿ ನಿಯಮದಂತೆ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಆದಾಗ್ಯೂ ಅಲ್ಲಿ ತೊಂದರೆ ಆಗುತ್ತಿದ್ದರೆ, ಸ್ಥಳಕ್ಕೆ ಜಿಯೋಲಾಜಿಸ್ಟ್ ಕಳುಹಿಸಿ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಸಮಾಧಾನಗೊಳ್ಳದ ಗ್ರಾಮಸ್ಥರು, ಕೂಡಲೆ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಪಟ್ಟುಹಿಡಿದರು. ಈ ಸಂದರ್ಭ ಗ್ರಾಮಸ್ಥರು ಜಿಲ್ಲಾಧಿಕಾರಿ ಜತೆ ವಾಗ್ವಾದ ನಡೆಸಿದಾಗ ಸಭೆಯಲ್ಲಿ ಕೆಲ ಸಮಯ ಗೊಂದಲ ಉಂಟಾಯಿತು.

30 ವರ್ಷದಿಂದ ಅಲೆದಾಟ: ದೋರನಾಳು ಗ್ರಾಮದ 70 ವರ್ಷದ ಚನ್ನಪ್ಪ 30 ವರ್ಷಗಳಿಂದ 30 ಗುಂಟೆ ಜಮೀನಿಗೆ ತಹಸೀಲ್ದಾರ್ ಕಚೇರಿ, ಎಸಿ, ಡಿಸಿ ಕಚೇರಿಗೆ ಅಲೆದಾಡಿ ಹೈರಣಾಗಿದ್ದಾರೆ. ಚನ್ನಪ್ಪ ಸಹ ಮಂಗಳವಾರ ಜನ ಸಂಪರ್ಕ ಕಚೇರಿಯಲ್ಲಿ ಜಿಲ್ಲಾಧಿಕಾರಿಗೆ ಮನವಿ ನೀಡಿ, ನ್ಯಾಯ ಒದಗಿಸುವಂತೆ ಬೇಡಿಕೊಂಡರು. ತರೀಕೆರೆ ಉಪ ತಹಸೀಲ್ದಾರ್ ಅವರು 1980ರ ನ.12ರಲ್ಲಿ ಬಗರ್ ಹುಕುಂನಡಿ 30 ಗುಂಟೆ ಜಮೀನನ್ನು ಲಕ್ಕವಳ್ಳಿ ಸಮೀಪದ ಗೋಪಾಳ ಗ್ರಾಮದ ಸ.ನಂ. 52/ಪಿ266ರಲ್ಲಿ ಮಂಜೂರು ಮಾಡಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಇವರ ಜಮೀನಿನಲ್ಲಿ ಬಲಾಢ್ಯರೊಬ್ಬರು ಮನೆ ನಿರ್ವಿುಸಿಕೊಂಡು ಜಮೀನನ್ನು ಉಳುಮೆ ಮಾಡುತ್ತಿದ್ದಾರೆ. ಈ ಬಗ್ಗೆ ಚನ್ನಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಜಮೀನು ಸ್ವಾಧೀನಕ್ಕೆ ಬಿಡಿಸಿಕೊಂಡುವಂತೆ ಆದೇಶಿಸಿದೆ. ಆದರೆ ಅಧಿಕಾರಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಲು ಮುಂದಾಗದಿರುವುದರಿಂದ ಚನ್ನಪ್ಪ ಅವರು 30 ವರ್ಷಗಳಿಂದ ಅಲೆದಾಡುತ್ತಿದ್ದಾರೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲಿಸಲು ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್​ಗೆ ಸೂಚಿಸಿದರು.