ಸೌದಿ ಡಿಎಲ್ ಪಡೆದ ಮೊದಲ ಕನ್ನಡತಿ

ರಾಜೇಶ್ ಶೆಟ್ಟಿ ದೋಟ, ಮಂಗಳೂರು

ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಸಂಪ್ರದಾಯ ಹಿನ್ನೆಲೆಯಲ್ಲಿ ಮಹಿಳೆಯರಿಗಿದ್ದ ವಾಹನ ಚಾಲನಾ ನಿಷೇಧ ತೆರವುಗೊಂಡ ಬಳಿಕ ಅಲ್ಲಿನ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಥಮ ಬಾರಿಗೆ ಕನ್ನಡತಿಯೊಬ್ಬರು ಪರವಾನಗಿ ಪಡೆದುಕೊಂಡಿದ್ದಾರೆ.

ಮೂಲತಃ ಕುಂದಾಪುರ ಆಲ್ಬಾಡಿ ನಿವಾಸಿ, ಪ್ರಸ್ತುತ ಪತಿ ಹಾಗೂ ಇಬ್ಬರು ಪುತ್ರರೊಂದಿಗೆ ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿ ಕಳೆದ 15 ವರ್ಷಗಳಿಂದ ನೆಲೆಸಿರುವ ದಂತವೈದ್ಯೆ ಡಾ.ವಾಣಿಶ್ರೀ ಸಂತೋಷ್ ಶೆಟ್ಟಿ ನ.21ರಂದು ವಾಹನ ಚಾಲನಾ ಪರವಾನಗಿ ಪಡೆದುಕೊಂಡಿದ್ದಾರೆ. ಈ ಮೂಲಕ ಸೌದಿಯಲ್ಲಿ ಡಿಎಲ್ ಪಡೆದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕನಸಿನ ಕಾರಿನ ಚಾಲನೆ: ವಾಹನ ಚಾಲನೆ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು 2002ರಲ್ಲಿ ಭಾರತೀಯ ವಾಹನ ಚಾಲನಾ ಪರವಾನಗಿ ಪಡೆದಿದ್ದರು. ಸ್ವತಃ ಚಾಲನೆ ಮಾಡುವಂತಿದ್ದರೆ ಯಾರನ್ನೂ ಆಶ್ರಯಿಸಬೇಕಾಗಿಲ್ಲ ಎಂಬುದು ಪ್ರಮುಖ ಕಾರಣ. ವಿವಾಹವಾಗಿ ಸೌದಿಗೆ ತೆರಳಿದ ಬಳಿಕ ಆಕಾಂಕ್ಷೆಗೆ ಬ್ರೇಕ್ ಬಿದ್ದಿತ್ತು. ಇದೀಗ ಅವರ ಕನಸು ಮತ್ತೆ ಗರಿಗೆದರಿದೆ.

ಸೌದಿ ಮಹಿಳೆಯರಿಗೆ ಆದ್ಯತೆ: ಸೌದಿ ರಸ್ತೆಯಲ್ಲಿ ವಾಹನ ಚಾಲನೆ ಮಾಡುತ್ತಿರುವುದು ಖುಷಿ ನೀಡುತ್ತಿದೆ. ರಸ್ತೆಗಳಲ್ಲಿ ಬೆರಳೆಣಿಕೆ ಮಂದಿ ಮಹಿಳೆಯರು ಮಾತ್ರ ವಾಹನ ಚಲಾಯಿಸುತ್ತಿರುವುದರಿಂದ ಜನ ಬೆರಗುಗಣ್ಣಿನಿಂದ ವೀಕ್ಷಿಸುತ್ತಾರೆ. ಪ್ರಸ್ತುತ ವರ್ಕಿಂಗ್ ವಿಸಾದಲ್ಲಿ ಆಗಮಿಸಿದ ಕೆಲವೇ ಕೆಲವು ಭಾರತೀಯ ಮಹಿಳೆಯರು ಮಾತ್ರ ಪರವಾನಗಿ ಪಡೆದುಕೊಂಡಿದ್ದಾರೆ. ಪರವಾನಗಿ ನೀಡುವಲ್ಲಿ ಸೌದಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕೇರಳ ಪಟ್ಟಣಂತಿಟ್ಟ ಜಿಲ್ಲೆಯ ಸಾರಮ್ಮ ಥಾಮಸ್ ಸೌದಿ ಅರೇಬಿಯಾದಿಂದ ಕಾರು ಚಾಲನಾ ಪರವಾನಗಿ ಪಡೆದ ಭಾರತದ ಮೊದಲ ಮಹಿಳೆಯಾಗಿದ್ದು, ಕರ್ನಾಟಕದ ಮೊದಲಿಗಳು ನಾನು ಎಂಬ ಹೆಮ್ಮೆಯಿದೆ ಎನ್ನುತ್ತಾರೆ ವಾಣಿಶ್ರೀ ಶೆಟ್ಟಿ.

ಉದ್ಯೋಗ ನಷ್ಟ ಭೀತಿ: ಸೌದಿ ಆಡಳಿತದ ಈ ನಿರ್ಧಾರದಿಂದ ಇಲ್ಲಿ ಕಾರ್ಯನಿರ್ವಹಿಸುವ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಾಹನ ಚಾಲಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಆತಂಕ ಸ್ವಲ್ಪಮಟ್ಟಿಗೆ ನಿಜವೇ ಆದರೂ, ದೊಡ್ಡ ಪರಿಣಾಮವೇನೂ ಬೀರಲಾರದು. ಸೌದಿ ಪ್ರಜೆಗಳು ಮನೆ ಹಾಗೂ ಕಚೇರಿ ವಾಹನಗಳಿಗೆ ಚಾಲಕರನ್ನು ನೇಮಿಸಿಕೊಳ್ಳುವುದು ಅನಿವಾರ್ಯ ಪ್ರಕ್ರಿಯೆಗಳಲ್ಲೊಂದು. ವಾಣಿಜ್ಯ ಸಂಸ್ಥೆಗಳಲ್ಲಿ ಪುರುಷ ಚಾಲಕರಿಗಷ್ಟೇ ಪ್ರಾಧಾನ್ಯತೆ ಇರುವುದರಿಂದ ದೊಡ್ಡ ಹೊಡೆತವೇನೂ ಇಲ್ಲ ಎನ್ನುತ್ತಾರೆ ವಾಣಿಶ್ರೀ ಶೆಟ್ಟಿ.

ಕಠಿಣ ಚಾಲನಾ ಪರೀಕ್ಷೆ: ಸೌದಿ ಚಾಲನಾ ಪರೀಕ್ಷೆ ಕಠಿಣವಾಗಿದ್ದು, ಭಾರತೀಯ ಚಾಲಕರಿಗೆ ಸವಾಲಾಗಿದೆ. ಸಂಪೂರ್ಣ ಚಾಲನಾ ಕೌಶಲವನ್ನು ಡಿಜಿಟಲ್ ಪ್ರಕ್ರಿಯೆಯಲ್ಲಿ ದಾಖಲಿಸಿ, ಬಳಿಕ ವಿವಿಧ ಮಾನದಂಡಗಳನ್ನು ಅನುಸರಿಸಿ ಪರವಾನಗಿಗೆ ಶಿಫಾರಸು ಮಾಡಲಾಗುತ್ತದೆ.

ಮಹಿಳಾ ಇನ್‌ಸ್ಪೆಕ್ಟರ್‌ಗಳ ತಂಡ: ಮಹಿಳಾ ಚಾಲಕರನ್ನೊಳಗೊಂಡ ವಾಹನಗಳು ಅಪಘಾತಕ್ಕೆ ಗುರಿಯಾದ ಸಂದರ್ಭ ತನಿಖೆ ನಡೆಸುವುದಕ್ಕಾಗಿ ಮಹಿಳಾ ಇನ್‌ಸ್ಟೆಕ್ಟರ್‌ಗಳನ್ನು ನೇಮಿಸಲಾಗಿದೆ. ಖಾಸಗಿ ವಿಮಾ ಕಂಪನಿ ಮೂಲಕ ನೇಮಕಗೊಳಿಸಿ ಅವರಿಗೆ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಸಾಂಸ್ಕೃತಿಕ ಚಟುವಟಿಕೆಯಲ್ಲೂ ಮುಂದು: ವಾಣಿಶ್ರೀ ಶೆಟ್ಟಿ ಪತಿ ಸಂತೋಷ್ ಶೆಟ್ಟಿ ಸೌದಿಯಲ್ಲಿನ ಕರಾವಳಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದು, ಸಂಘದ ಚಟುವಟಿಕೆಗಳಲ್ಲಿ ವಾಣಿಶ್ರೀ ಅವರೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸೌದಿಯಲ್ಲಿರುವ ಕನ್ನಡಿಗರನ್ನು ಒಟ್ಟು ಸೇರಿಸಿ ಕನ್ನಡ ರಾಜ್ಯೋತ್ಸವ, ರಕ್ತದಾನ, ಯೋಗ ಶಿಬಿರ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘದ ಮೂಲಕ ಆಯೋಜಿಸುತ್ತಿದ್ದಾರೆ.

ಸೌದಿ ಆಡಳಿತ ಐತಿಹಾಸಿಕ ನಿರ್ಧಾರ: ಮಹಿಳೆಯರು ವಾಹನ ಚಲಾಯಿಸುವುದನ್ನು ನಿಷೇಧಿಸಿದ್ದ ಏಕೈಕ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿ ನಿಷೇಧ ತೆರವಿಗೆ ನಿರಂತರ ಹೋರಾಟ ನಡೆಯುತ್ತಿತ್ತು. ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಆಲ್-ಸೌದ್ ರೂಪಿಸಿದ ‘ಮಿಷನ್ 2030’ ಎಂಬ ಯೋಜನೆ ಅಂಗವಾಗಿ ಮಹಿಳಾ ಸಬಲೀಕರಣದ ಪ್ರಮುಖ ಹೆಜ್ಜೆಯಾಗಿ ದೇಶದ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡುವ ಐತಿಹಾಸಿಕ ನಿರ್ಧಾರವನ್ನು 2017 ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು. ಬಳಿಕ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ಆರಂಭಗೊಂಡಿತ್ತು. ಸಂಪ್ರದಾಯವನ್ನು ಬದಿಗೊತ್ತಿ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಪ್ರಪಂಚದಾದ್ಯಂತ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಜೂ.24ರಿಂದ ಮಹಿಳೆಯರು ಅಧಿಕೃತವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ವಾಹನ ಚಾಲನೆ ಆರಂಭಿಸಿದ್ದರು.

ಕಾರು ಚಾಲನೆ ಈಗ ದೈನಂದಿನ ಅನಿವಾರ್ಯಗಳಲ್ಲಿ ಒಂದಾಗಿದೆ. ಈ ಹಿಂದೆ ಕಚೇರಿ ಅಥವಾ ಇನ್ನಿತರ ಕಡೆ ಹೋಗಬೇಕಾದ ಸಂದರ್ಭ ಚಾಲಕ ಅಥವಾ ಪತಿಯನ್ನು ಆಶ್ರಯಿಸಬೇಕಾಗಿತ್ತು. ಇದೀಗ ಸ್ವತಃ ಚಾಲನೆ ಮಾಡುತ್ತಿರುವುದರಿಂದ ಸಮಯ ಹಾಗೂ ವೆಚ್ಚ ಉಳಿತಾಯವಾದಂತಾಗಿದೆ. ಸೌದಿ ಆಡಳಿತದ ಈ ನಿರ್ಧಾರ ಎಲ್ಲ ಮಹಿಳೆಯರಿಗೂ ಸಂತೋಷ ತಂದಿದೆ.
| ಡಾ.ವಾಣಿಶ್ರೀ ಸಂತೋಷ್ ಶೆಟ್ಟಿ