ಗ್ಲಾಸ್ಗೋ: ಆತಿಥೇಯ ಸ್ಕಾಟ್ಲೆಂಡ್, ನೆದರ್ಲೆಂಡ್ ಹಾಗೂ ನೇಪಾಳ ನಡುವಿನ ತ್ರಿಕೋನ ಸರಣಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಮೊಟ್ಟ ಮೊದಲ 3 ಸೂಪರ್ ಓವರ್ಗೆ ಸಾಯಾಗಿದೆ. ಸೋಮವಾರ ರಾತ್ರಿ ನಡೆದ ನೇಪಾಳ ವಿರುದ್ಧ ಪಂದ್ಯದ ಮೂರನೇ ಸೂಪರ್ ಓವರ್ನಲ್ಲಿ ನೆದರ್ಲೆಂಡ್ ಗೆಲುವು ದಕ್ಕಿಸಿಕೊಂಡಿದೆ. ಪಂದ್ಯ ಟೈಗೊಂಡ ಬಳಿಕ ಮೊದಲ 2 ಸೂಪರ್ ಓವರ್ ಕೂಡ ಟೈ ಆಗಿತ್ತು. ಕಳೆದ ವರ್ಷ ಕೆಎಸ್ಸಿಎಯ ಮಹಾರಾಜ ಟ್ರೋಫಿ ಟಿ20ಯಲ್ಲೂ ಹುಬ್ಬಳ್ಳಿ ಟೈಗರ್ಸ್-ಬೆಂಗಳೂರು ಬ್ಲಾಸ್ಟರ್ಸ್ ನಡುವಿನ ಪಂದ್ಯದಲ್ಲೂ 3 ಸೂಪರ್ ಓವರ್ ನಡೆದಿತ್ತು. ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ- ಆಫ್ಘನ್ ನಡುವೆ 2 ಸೂಪರ್ ಓವರ್ ನಡೆದಿದ್ದೇ ಇದುವರೆಗಿನ ಗರಿಷ್ಠವಾಗಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ನೆದರ್ಲೆಂಡ್ 7 ವಿಕೆಟ್ಗೆ 152 ರನ್ಗಳಿಸಿತು. ಪ್ರತಿಯಾಗಿ ನೇಪಾಳ 8 ವಿಕೆಟ್ಗೆ 152 ರನ್ಗಳಿಸಿ ರೋಚಕ ಟೈ ಸಾಧಿಸಿತು. ಕೊನೇ ಓವರ್ನಲ್ಲಿ 16 ರನ್ ಬೇಕಿತ್ತು. ಅಂತಿಮ ಎಸೆತದಲ್ಲಿ ನಂದನ್ ಕುಮಾರ್ ಬೌಂಡರಿ ಸಿಡಿಸಿ ಪಂದ್ಯ ಟೈಗೊಳಿಸಿದರು.
ಫಲಿತಾಂಶ ರ್ನಿಣಯಕ್ಕಾಗಿ ನಡೆದ ಮೊದಲ ಸೂಪರ್ ಓವರ್ನಲ್ಲಿ ನೇಪಾಳ 1 ವಿಕೆಟ್ಗೆ 19 ರನ್ಗಳಿಸಿತು. ಪ್ರತಿಯಾಗಿ ನೆದರ್ಲೆಂಡ್ ತಂಡವೂ ವಿಕೆಟ್ ನಷ್ಟವಿಲ್ಲದೆ 19 ರನ್ಗಳಿಸಿ ಮತ್ತೆ ಟೈ ಸಾಧಿಸಿತು. ನಂತರ 2ನೇ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ನೆದರ್ಲೆಂಡ್ 1 ವಿಕೆಟ್ಗೆ 17 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ 2 ಸಿಕ್ಸರ್, ಬೌಂಡರಿ ಸಿಡಿಸಿದ ನೇಪಾಳ ವಿಕೆಟ್ ನಷ್ಟವಿಲ್ಲದೆ 17 ರನ್ಗಳಿಸಿ ಟೈ ಮಾಡಿಕೊಂಡಿತು. ಮೂರನೇ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ನೇಪಾಳ 4 ಎಸೆತಗಳಲ್ಲಿ ಒಂದೂ ರನ್ ಗಳಿಸದೆ 2 ವಿಕೆಟ್ ಕೈ ಚೆಲ್ಲಿತು. ಪ್ರತಿಯಾಗಿ ಮೈಕೆಲ್ ಲೆವಿಟ್ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ನೆದರ್ಲೆಂಡ್ಗೆ ರೋಚಕ ಗೆಲುವು ತಂದುಕೊಟ್ಟರು.