ಮೊದಲ ಬಾರಿಗೆ ದರ್ಶನ ನೀಡಿದ ಚಂದ್ರಯಾನ-2 ಉಪಗ್ರಹ ಮತ್ತು ಅದು ಹೊತ್ತೊಯ್ಯಲಿರುವ ಪ್ರಜ್ಞಾನ್​ ರೋವರ್​

ನವದೆಹಲಿ: ಇನ್ನೊಂದು ವಾರದಲ್ಲಿ ನಭಕ್ಕೆ ಜಿಗಿಯಲಿರುವ ಚಂದ್ರಯಾನ್​-2 ಉಪಗ್ರಹ ಮತ್ತು ಅದು ಹೊತ್ತೊಯ್ಯಲಿರುವ ಪ್ರಜ್ಞಾನ್​ ರೋವರ್​ನ ಜೋಡಣೆಯ ಅಂತಿಮ ಕಾರ್ಯ ಭರದಿಂದ ಸಾಗಿದೆ. ಇದೇ ಮೊದಲ ಬಾರಿಗೆ ಅಂತಿಮ ಜೋಡಣೆ ಹಂತದಲ್ಲಿರುವ ಅವುಗಳ ಛಾಯಾಚಿತ್ರ ಬಿಡುಗಡೆಯಾಗಿದೆ.

ಅಂದಾಜು 1 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಭಾರತದ ಅತ್ಯಂತ ಬಲಿಷ್ಠ ಉಡಾಹಕ ಎನಿಸಿಕೊಂಡಿರುವ ಜಿಎಸ್​ಎಲ್​ವಿ ಮಾರ್ಕ್​ 3 ಇದನ್ನು ಹೊತ್ತು, ಚಂದ್ರನ ಅಂಗಳದತ್ತ ಸಾಗಲಿದೆ. ರೋವರ್​ ಪ್ರಜ್ಞಾನ್​ ಅಲ್ಲದೆ ವಿಕ್ರಂ ಎಂಬ ಹೆಸರಿನ ಲ್ಯಾಂಡರ್​ ಸೇರಿ ಒಟ್ಟು 14 ವೈಜ್ಞಾನಿಕ ಪ್ರಯೋಗಗಳಿಗೆ ಅವಕಾಶ ಕಲ್ಪಿಸುವ ಸೂಟ್​ ಅನ್ನು ಕೊಂಡೊಯ್ಯಲಿದೆ. ಇದರ ಒಟ್ಟಾರೆ ತೂಕ 3.8 ಟನ್​ ಆಗಿದೆ.

27 ಕೆ.ಜಿ. ತೂಕವಿದೆ ರೋವರ್​ ಪ್ರಜ್ಞಾನ್​
ರೋವರ್​ ಪ್ರಜ್ಞಾನ್​ ಒಟ್ಟು 27 ಕೆ.ಜಿ. ಭಾರವಿದೆ. ಆರು ಗಾಲಿಗಳನ್ನು ಹೊಂದಿರುವ ಇದು ಇದುವರೆಗೂ ಯಾರೊಬ್ಬರೂ ಅನ್ವೇಷಿಸದಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಅನ್ವೇಷಣೆ ಕಾರ್ಯ ನಡೆಸಲಿದೆ. ಇದೊಂದು ರೋಬಾಟಿಕ್​ ಯೋಜನೆಯಾಗಿದ್ದು, ಇದರಲ್ಲಿ ಬಾಹ್ಯಾಕಾಶಯಾನಿಗಳು ಪ್ರಯಾಣಿಸುವುದಿಲ್ಲ.

ಆರ್ಬಿಟರ್​ ಮೇಲೆ ಲ್ಯಾಂಡರ್​
ಲ್ಯಾಂಡರ್​ ವಿಕ್ರಮ್​ ಆರ್ಬಿಟರ್​ನ ಮೇಲ್ಭಾಗದಲ್ಲಿ ಇರಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಚಂದ್ರಯಾನ-2 ಉಪಗ್ರಹದ ಒಳಭಾಗದಲ್ಲಿನ ಭಾರಿ ತಾಪಮಾನವನ್ನು ತಡೆದುಕೊಳ್ಳಲು ಅನುವಾಗುವಂತೆ ಚಿನ್ನದ ಫಿಲಂನಲ್ಲಿ ಇದನ್ನು ಸುತ್ತಿರಿಸಲಾಗಿದೆ. ಲ್ಯಾಂಡರ್​ನ ಒಳಭಾಗದಲ್ಲಿ ರೋವರ್​ ಪ್ರಜ್ಞಾನ್​ ಅನ್ನು ಇರಿಸಲಾಗಿದೆ. ಲ್ಯಾಂಡರ್​ನಲ್ಲಿ ವ್ಯವಸ್ಥೆಗೊಳಿಸಲಾಗಿರುವ ರ‍್ಯಾಂಪ್​ ಅನ್ನು ಬಳಸಿಕೊಂಡು ಚಂದ್ರನ ಅಂಗಳಕ್ಕೆ ರೋವರ್​ ಇಳಿಯಲಿದೆ.

ಚಂದ್ರನ ಮೇಲ್ಮೈನ ಚಿತ್ರವನ್ನು ಸರೆಹಿಡಿಯಲಿರುವ ಆರ್ಬಿಟರ್​ ಚಂದ್ರನ ಅಂಗಳದಲ್ಲಿರುವ ಖನಿಜ ಸಂಪತ್ತನ್ನು ಆಮೂಲಾಗ್ರವಾಗಿ ಪರಿಶೀಲಿಸಲಿದೆ. ಒಟ್ಟು 1,471 ಕೆ.ಜಿ. ಭಾರವಿರುವ ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಉಂಟಾಗುವ ಕಂಪನಗಳು ಮತ್ತು ಅಲ್ಲಿನ ತಾಪಮಾನ ಕುರಿತು ಅಧ್ಯಯನ ನಡೆಯಲಿದೆ. ಚಂದ್ರ ಮಣ್ಣಿನ ವಿಶ್ಲೇಷಣೆ ನಡೆಸಲು ಅನುವಾಗುವಂತೆ 27 ಕೆ.ಜಿ. ಭಾರವಿರುವ ರೋವರ್​ ಪ್ರಜ್ಞಾನ್​ನಲ್ಲಿ ಕ್ಯಾಮರಾಗಳು ಮತ್ತು ಉಪಕರಣಗಳನ್ನು ವ್ಯವಸ್ಥೆ ಮಾಡಲಾಗಿದೆ. (ಏಜೆನ್ಸೀಸ್​)Leave a Reply

Your email address will not be published. Required fields are marked *