More

    ಮೊದಲ ದಿನ… ಮಾರ್ಕೆಟ್ ತುಂಬಾ ಜನ..

    ಹುಬ್ಬಳ್ಳಿ: ಸಂಜೆ 5ರವರೆಗೆ ಸಾರ್ವಜನಿಕ ಚಟುವಟಿಕೆಗೆ ಷರತ್ತುಬದ್ಧ ಅನುಮತಿ ಸಿಕ್ಕ ಖುಷಿಯಲ್ಲಿ ವಾಣಿಜ್ಯ ನಗರಿಯಲ್ಲಿ ವ್ಯಾಪಾರ ವಹಿವಾಟು ಮತ್ತೆ ಗರಿಗೆದರಿರುವುದು ಒಂದು ಕಡೆಯಾದರೆ, ಕರೊನಾ ಮೂರನೇ ಅಲೆ ಮುಂಬೈಯಲ್ಲಿ ಅಲ್ಲ; ಛೋಟಾ ಮುಂಬೈಯಲ್ಲೇ ಶುರುವಾಗುತ್ತದೇನೊ ಎನಿಸುವಷ್ಟು ನಿಯಮಾವಳಿ ಉಲ್ಲಂಘನೆ ಇನ್ನೊಂದು ಕಡೆ…
    ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ ಕೋವಿಡ್ ಲಾಕ್​ಡೌನ್ ಸಡಿಲಿಕೆ ವಿಸ್ತರಣೆ ಮತ್ತು ವಿವಿಧ ಚಟುವಟಿಕೆಗೆ ಅನುಮತಿ ಸಿಕ್ಕಿದ್ದರಿಂದ ಸೋಮವಾರದಂದು ನಗರದ ಪರಿಸ್ಥಿತಿ ಹೀಗೆ ಇತ್ತು!
    ವ್ಯಾಪಾರಿಗಳು ವಹಿವಾಟು ಚುರುಕುಗೊಳಿಸಲು ತುದಿಗಾಲ ಮೇಲೆ ಇದ್ದರು. ಖರೀದಿಸುವವರೂ ಅಷ್ಟೇ ಅವಸರದಲ್ಲಿದ್ದರು. ಹೀಗಾಗಿ ಒಂದೇ ಸಲ ಪ್ರಮುಖ ಮಾರುಕಟ್ಟೆಗಳಿಗೆ ಹೆಚ್ಚು ಜನರು ಬಂದಿದ್ದರು.
    ಅಗತ್ಯ ವಸ್ತುಗಳ ಆಯ್ಕೆ, ದರ ವಿಚಾರಣೆ, ಚೌಕಾಶಿ ಮಾಡಿ ದರ ಹೊಂದಿಸುವಿಕೆ, ಅಲ್ಲೇ ಫೋನ್ ಕರೆಗೆ ಉತ್ತರಿಸುವಿಕೆ… ಇವೆಲ್ಲದರ ಮಧ್ಯೆ ಕಿರಿಕಿರಿ ಎನಿಸಿ ಮಾಸ್ಕ್ ಸರಿಸಿಕೊಂಡವರು ಹಲವರು. ಕಾಯಂ ಅಂಗಡಿಗಳ ಮಾಲೀಕರು ಅಂತರ ನಿರ್ವಹಣೆಗೆ ಕೌಂಟರ್ ಬಳಿ ದಾರ ಕಟ್ಟುವಂಥ ಸರಳ ಉಪಕ್ರಮ ಕೈಗೊಂಡಿದ್ದಾರೆ. ಬೀದಿಬದಿ ವ್ಯಾಪಾರಿಗಳನೇಕರು ಕರೊನಾ ಮರೆತೇಬಿಟ್ಟಿದ್ದರು!
    ಬೆಳಗ್ಗೆ ಜನ ಸಂಚಾರ ಸ್ವಲ್ಪ ಕಡಿಮೆ ಇದ್ದರೂ ಮಧ್ಯಾಹ್ನದ ವೇಳೆಗೆ ಮಾರುಕಟ್ಟೆಗಳಿಗೆಲ್ಲ ಲಾಕ್​ಡೌನ್ ಪೂರ್ವದ ಸ್ವರೂಪ ಬಂದಿತ್ತು. ಹಲವು ಕಡೆಗಳಲ್ಲಿ ಒಳಚರಂಡಿ, ಮಳೆನೀರು ಗಟಾರ ನಿರ್ವಣದಂಥ ಕೆಲಸಗಳು ನಡೆದಿರುವುದರಿಂದ ವಾಹನ ದಟ್ಟಣೆ ಸಾಮಾನ್ಯವಾಗಿತ್ತು. ವೃತ್ತಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ಸಾಧ್ಯವಿರಲಿಲ್ಲ.
    ಸಂಜೆ 4.30ರ ವೇಳೆಗೆಲ್ಲ ಪೊಲೀಸರು ಮೈಕ್​ನಲ್ಲಿ ಎಚ್ಚರಿಸುತ್ತ ಹೋದಂತೆ ಗ್ರಾಹಕರು, ಅಂಗಡಿಕಾರರು ಗಡಿಬಿಡಿಯಲ್ಲಿ ವಹಿವಾಟು ಅಂತಿಮಗೊಳಿಸಿದರು. 6 ಗಂಟೆವರೆಗೂ ವಾಹನ ಸಂಚಾರ ತುಸು ಜೋರಾಗಿಯೇ ಇತ್ತು.
    ಹೋಟೆಲ್​ಗಳಲ್ಲಿ…: ನಗರದ ಹೋಟೆಲ್​ಗಳಲ್ಲಿ ಬೆಳಗಿನ ವೇಳೆಯಲ್ಲಿ ಅಷ್ಟೊಂದು ಗ್ರಾಹಕರು ಕಂಡುಬರಲಿಲ್ಲ. ಮಧ್ಯಾಹ್ನದ ವೇಳೆಗೆ ಬೇಡಿಕೆ ಅಧಿಕವಾಗಿತ್ತು.
    ಧಾರವಾಡ ವರದಿ: ಕರೊನಾ ಹಾವಳಿಯಿಂದ ಸುಮಾರು 2 ತಿಂಗಳು ಕಾಲ ರಾಜ್ಯ ಸರ್ಕಾರ ಘೊಷಣೆ ಮಾಡಿದ್ದ ಲಾಕ್​ಡೌನ್ ಅನ್ನು ಸೋಮವಾರದಿಂದ ತೆರವು ಮಾಡಿದ್ದು, ನಗರದ ಜನಜೀವನ ಯಥಾಸ್ಥಿತಿಗೆ ಮರಳಿದೆ.
    ಸುಭಾಷ ರಸ್ತೆ, ಟಿಕಾರೆ ರಸ್ತೆ, ಸೂಪರ್ ಮಾರುಕಟ್ಟೆ, ಗಾಂಧಿಚೌಕ್, ನೆಹರು ಮಾರುಕಟ್ಟೆ ಸೇರಿ ಎಲ್ಲ ಕಡೆಗಳಲ್ಲಿ ಅಂಗಡಿಗಳನ್ನು ಮಾಲೀಕರು ಸ್ವಚ್ಛಗೊಳಿಸಿ ಪ್ರಾರಂಭಿಸಿದರು. ಆರ್ಥಿಕವಾಗಿ ತೊಂದರೆಗೆ ಒಳಗಾದ ವ್ಯಾಪಾರಸ್ಥರು ಅನ್​ಲಾಕ್​ನಿಂದ ನಿರಾಳರಾಗಿದ್ದಾರೆ. ಅದರಲ್ಲೂ ಬಟ್ಟೆ ಅಂಗಡಿ, ಪುಸ್ತಕ ಅಂಗಡಿ, ಪಾತ್ರೆ, ಸೇರಿ ಇತರೆ ಅಂಗಡಿಗಳು ಕೋವಿಡ್ ನಿಯಮ ಪಾಲನೆ ಮಾಡಿ ಕಾರ್ಯ ಆರಂಭಿಸಿವೆ.
    ಇನ್ನು ಧಾರವಾಡ ಗ್ರಾಮೀಣ, ನಗರ ಹಾಗೂ ಹೊರ ಜಿಲ್ಲೆಗಳಿಗೆ ಬಸ್ ಸಂಚಾರ ಸಹ ಆರಂಭಿಸಲಾಗಿದೆ. ಧಾರವಾಡ ಡಿಪೋದಿಂದ 191 ಮಾರ್ಗಗಳಿದ್ದು, ಈ ಪೈಕಿ ಶೇ. 40ರಷ್ಟು ಮಾರ್ಗಗಳಿಗೆ 80 ಬಸ್​ಗಳು ಸಂಚಾರ ನಡೆಸಿವೆ. ಬೆಳಗ್ಗೆ 6 ರಿಂದ ರಾತ್ರಿ 7ರ ವರೆಗೆ ಸಂಚರಿಸಲಿವೆ. ಆದರೆ, ಬಹುತೇಕ ಜನರು ಸ್ವಂತ ವಾಹನದಲ್ಲೇ ಸಂಚಾರ ನಡೆಸಿದ್ದರಿಂದ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.
    ಬಾರದ ಜನ: ಹೋಟೆಲ್​ನಲ್ಲಿ ಶೇ. 50ರಷ್ಟು ಜನರು ಕುಳಿತು ಆಹಾರ ಸೇವಿಸಲು ಅವಕಾಶ ನೀಡಿದೆ. ಆದರೆ, ಎಲ್ಲ ಬಗೆಯ ಆಹಾರ ಸಿದ್ಧಪಡಿಸಿ ಗ್ರಾಹಕರಿಗೆ ಕಾಯುತ್ತಿದ್ದ ಹೋಟೆಲ್ ಮಾಲೀಕರಿಗೆ ನಿರಾಸೆ ಕಾದಿತ್ತು. ನಿರೀಕ್ಷಿತ ಮಟ್ಟದ ಗ್ರಾಹಕರು ಆಗಮಿಸದ ಹಿನ್ನೆಲೆಯಲ್ಲಿ ಹೋಟೆಲ್​ಗಳು ಖಾಲಿ ಖಾಲಿಯಾಗಿದ್ದವು.
    5ರ ನಂತರ ಬಂದ್ : ಅನಲಾಕ್ ಘೊಷಣೆ ಮಾಡಿದ್ದರೂ ಅಂಗಡಿಗಳು ಸಂಜೆ 5ರವರೆಗೆ ಮಾತ್ರ ತೆರೆಯಲು ಅವಕಾಶವಿದೆ. ಅದರಂತೆ ಬೆಳಗ್ಗೆಯಿಂದ ಸಂಜೆವರೆಗೆ ವ್ಯಾಪಾರ ನಡೆಸಿದ ಅಂಗಡಿಕಾರರು 5 ಗಂಟೆಗೆ ಬಳಿಕ ಅಂಗಡಿ ಬಂದ್ ಮಾಡಿದ್ದರು. ಹೀಗಾಗಿ ಸಂಜೆ ಹೊತ್ತಿಗೆ ಮಾರುಕಟ್ಟೆ ರಸ್ತೆಗಳು ಮತ್ತೆ ಬಿಕೋ ಎನ್ನುತ್ತಿದ್ದವು.


    ಹೊಸೂರು ನಿಲ್ದಾಣದಿಂದ ಸಂಚಾರ: ಹಳೇ ಬಸ್ ನಿಲ್ದಾಣದ ಮರು ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಆರಂಭಗೊಳ್ಳುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುತ್ತಿದ್ದ ಎಲ್ಲ ಬಸ್​ಗಳ ಕಾರ್ಯಾಚರಣೆಯನ್ನು ಹೊಸೂರು ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಹುಬ್ಬಳ್ಳಿ ನಗರ ಸಾರಿಗೆಯ ಬಸ್​ಗಳು ಸೋಮವಾರ ಇಲ್ಲಿಂದ ಧಾರವಾಡ, ನವನಗರ, ಸುತಗಟ್ಟಿ, ಗಾಮನಗಟ್ಟಿ, ಸಿಬಿಟಿ, ಇನ್ನಿತರ ಕಡೆ ಸಂಚರಿಸಿದವು. ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಸೋಮವಾರ ಸಂಜೆಯವರಿಗೆ 127 ಬಸ್​ಗಳು ಸಂಚರಿಸಿವೆ. ಕೋವಿಡ್ ಪೂರ್ವದಲ್ಲಿ ನಿತ್ಯ 400 ರಿಂದ 419 ಬಸ್​ಗಳು ಸಂಚರಿಸುತ್ತಿದ್ದವು. ಇಂದು ಸುಮಾರು 200 ಬಸ್​ಗಳನ್ನು ಓಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಪ್ರಯಾಣಿಕರ ಕೊರತೆಯಿಂದಾಗಿ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಮಂಗಳವಾರದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಹುಬ್ಬಳ್ಳಿಯಿಂದ ನವಲಗುಂದ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ, ತಡಸ, ತರ್ಲಘಟ್ಟ, ಯರಗುಪ್ಪಿ ಮತ್ತಿತರ ಸ್ಥಳಗಳಿಗೆ ಹಾಗೂ ಜಿಲ್ಲೆಯಿಂದ ಹೊರಗೆ ಬೆಂಗಳೂರು, ಬೆಳಗಾವಿ, ಗೋಕಾಕ, ಸವದತ್ತಿ, ಗದಗ, ಕೊಪ್ಪಳ, ರೋಣ, ನರಗುಂದ, ವಿಜಯಪುರ, ಮುಂಡಗೋಡ, ಯಲ್ಲಾಪುರ, ಕಾರವಾರ, ಹಾವೇರಿ, ದಾವಣಗೆರೆ, ಇನ್ನಿತರ ಕಡೆ ಬಸ್​ಗಳು ಸಂಚರಿಸಿವೆ. | ಎಚ್. ರಾಮನಗೌಡರ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts