ಗುಜರಾತ್​ ತಲುಪಿದ ನಾಲ್ಕು ಚಿನೂಕ್​ ಹೆಲಿಕಾಪ್ಟರ್​

ನವದೆಹಲಿ: ಅಮೆರಿಕದ ಬೋಯಿಂಗ್ ಸಂಸ್ಥೆ ನಿರ್ವಿುತ ನಾಲ್ಕು ಅತ್ಯಾಧುನಿಕ ಚಿನೂಕ್ ಹೆಲಿಕಾಪ್ಟರ್ ಗುಜರಾತ್​ನ ಮುಂದ್ರಾ ಬಂದರಿಗೆ ಭಾನುವಾರ ಬಂದಿವೆ. ಇವುಗಳನ್ನು ಗುಜರಾತ್​ನಲ್ಲೆ ಜೋಡಣೆ ಮಾಡಿ ನಂತರ ಚಂಡೀಗಢಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಇವು ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಯಾಗುತ್ತವೆ.

ಬೋಯಿಂಗ್ ಜತೆಗಿನ ಒಪ್ಪಂದ ಪ್ರಕಾರ, ಚಿನೂಕ್ ಹೆಲಿಕಾಪ್ಟರ್​ಗಳು ಮುಂದಿನ ತಿಂಗಳು ಭಾರತಕ್ಕೆ ರವಾನೆ ಆಗಬೇಕಿತ್ತು. ಆದರೆ, ಒಂದು ತಿಂಗಳು ಮೊದಲೇ ಬಂದಿವೆ. 2015ರಲ್ಲಿ ಭಾರತ ವೈಮಾನಿಕ ದಾಳಿ ನಡೆಸುವಂತಹ 22 ‘ಎಎಚ್-64ಇ ಅಪಾಚೆ’ ಮತ್ತು ಸರಕು ಸಾಗಣೆಯ 15 ‘ಸಿಎಚ್47ಎಫ್ ಚಿನೂಕ್’ ಹೆಲಿಕಾಪ್ಟರ್ ಪೂರೈಸುವಂತೆ ಅಮೆರಿಕದ ಬೋಯಿಂಗ್ ಸಂಸ್ಥೆಗೆ ಕೋರಿತ್ತು. ಈ ಉದ್ದೇಶಕ್ಕಾಗಿ -ಠಿ; 17 ಸಾವಿರ ಕೋಟಿಗೂ (2.50 ಬಿಲಿಯನ್ ಡಾಲರ್) ಹೆಚ್ಚಿನ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಮೊದಲ ಕಂತಿನಲ್ಲಿ ನಾಲ್ಕು ಚಿನೂಕ್ ಹೆಲಿಕಾಪ್ಟರ್ ಈಗ ಹಸ್ತಾಂತರವಾಗಿದೆ. ಚಿನೂಕ್ ಹೆಲಿಕಾಪ್ಟರ್ ಬಳಕೆ ಕುರಿತಂತೆ ಭಾರತದ ವಾಯುಪಡೆಯ ತಲಾ ನಾಲ್ವರು ಪೈಲಟ್ ಮತ್ತು ಇಂಜಿನಿಯರ್​ಗಳಿಗೆ ಕಳೆದ ಅಕ್ಟೋಬರ್​ನಲ್ಲಿ ಬೋಯಿಂಗ್ ಸಂಸ್ಥೆ ತರಬೇತಿ ನೀಡಿದೆ. ಅಮೆರಿಕದಲ್ಲಿರುವ ಭಾರತದ ರಾಯಭಾರಿ ಹರ್ಷ್ ಶ್ರಿಂಗ್ಲಾ ಅವರಿಗೆ ಫಿಲಡೆಲ್ಪಿಯಾದಲ್ಲಿರುವ ಬೋಯಿಂಗ್ ಘಟಕದಲ್ಲಿ ಈ ಹೆಲಿಕಾಪ್ಟರನ್ನು ಸಾಂಕೇತಿಕವಾಗಿ ಫೆ. 2ರಂದು ಒಪ್ಪಿಸಲಾಗಿತ್ತು.