ಮಿತಿಗಿಂತಲೂ ಅಧಿಕ ಪಟಾಕಿ ಮಾಲಿನ್ಯ

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ನಗರದಲ್ಲಿ ಪಟಾಕಿ ಸಿಡಿಸುವಿಕೆ ಹೆಚ್ಚಾಗಿರುವುದರಿಂದ ಹಲವು ಪ್ರದೇಶಗಳಲ್ಲಿ ಮಿತಿಗಿಂತಲೂ ಹೆಚ್ಚಿನ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗಿರುವುದು ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ- ಅಂಶಗಳಿಂದ ತಿಳಿದುಬಂದಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದ 7 ಭಾಗಗಳಲ್ಲಿ ನಿರಂತರ ವಾಯು ಪರಿವೇಷ್ಟಕಗಳ ಮೂಲಕ ತಪಾಸಣೆ ನಡೆಸಲಾಗಿದ್ದು, ಮಂಗಳವಾರ ಎಲ್ಲ 7 ಕೇಂದ್ರಗಳಲ್ಲಿ ಹೆಚ್ಚು ವಾಯುಮಾಲಿನ್ಯ ದಾಖಲಾಗಿದೆ. ನಗರ ರೈಲು ನಿಲ್ದಾಣದ ಸುತ್ತಮುತ್ತಲಿನ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಮಾಲಿನ್ಯ ಉಂಟಾಗಿದೆ.

ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಹೀಗಿದ್ದರೂ ನಗರದಲ್ಲಿ ಮಾಲಿನ್ಯ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ ಬೆಳಗ್ಗೆ 6ರಿಂದ ಬುಧವಾರ ಬೆಳಗ್ಗೆ 6 ಗಂಟೆವರೆಗೆ ಮಾಲಿನ್ಯ ಕುರಿತು ಅಂಕಿ-ಅಂಶಗಳನ್ನು ಸಂಗ್ರಹಿಸಿದೆ. ಸೋಮವಾರ ನಾಲ್ಕು ಕೇಂದ್ರಗಳಲ್ಲಿ ರಾಷ್ಟ್ರೀಯ ಮಿತಿಗಿಂತಲೂ ಅತಿಹೆಚ್ಚು ಮಾಲಿನ್ಯ ದಾಖಲಾದರೆ, ಮೂರು ಕೇಂದ್ರಗಳಲ್ಲಿ ಮಿತಿಗಿಂತಲೂ ಕಡಿಮೆ ಪ್ರಮಾಣದ ಮಾಲಿನ್ಯ ದಾಖಲಾಗಿತ್ತು.

ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಬುಧವಾರ ಬೆಳಗ್ಗೆ 6 ಗಂಟೆವರೆಗೆ ಎಲ್ಲ 7 ಕೇಂದ್ರಗಳಲ್ಲಿ ರಾಷ್ಟ್ರೀಯ ಮಿತಿಗಿಂತಲೂ ಅಧಿಕ ಪ್ರಮಾಣದ ಮಾಲಿನ್ಯ ದಾಖಲಾಗಿದೆ. ಎರಡೂ ದಿನಗಳು ಸಿಟಿ ರೈಲು ನಿಲ್ದಾಣ ಭಾಗದಲ್ಲಿ ರಾಷ್ಟ್ರೀಯ ಮಿತಿಗಿಂತಲೂ ಶೇ.100ಕ್ಕೂ ಅಧಿಕ ಮಾಲಿನ್ಯ ದಾಖಲಾಗಿರುವುದು ಆತಂಕ ಮೂಡಿಸಿದೆ.

ಅಕ್ರಮ ಪಟಾಕಿ ಮಳಿಗೆ ಜಪ್ತಿ

ಪರವಾನಗಿ ಪಡೆಯದೆ ಬಿಬಿಎಂಪಿ ಮೈದಾನದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಹುಕುಂ ಸಿಂಗ್ ಎಂಬಾತನ ವಿರುದ್ಧ ಇಂದಿರಾನಗರ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಇಂದಿರಾನಗರ 6ನೇ ಮುಖ್ಯರಸ್ತೆ ಡಿಫೆನ್ಸ್ ಕಾಲನಿಯ ಬಿಬಿಎಂಪಿ ಮೈದಾನದಲ್ಲಿ ಪಟಾಕಿ ಮಳಿಗೆ ತೆರೆದಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು.

ಸುಪ್ರೀಂಕೋರ್ಟ್ ಆದೇಶ ಲೆಕ್ಕಿಸದ ಜನರು

ಪಟಾಕಿ ಸಿಡಿಸುವುದಕ್ಕೆ ಸುಪ್ರೀಂಕೋರ್ಟ್ ಗಡುವು ನಿಗದಿ ಪಡಿಸಿದೆ. ಆದರೆ, ಜನರು ಮಾತ್ರ ತಲೆಕೆಡಿಸಿಕೊಳ್ಳದೆ ಬೆಳಗ್ಗೆಯಿಂದಲೇ ಪಟಾಕಿ ಸಿಡಿಸಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಶಬ್ದ ಮತ್ತು ವಾಯುಮಾಲಿನ್ಯ ತಡೆಯುವುದು ಸೇರಿ ಇನ್ನಿತರ ಕಾರಣಗಳಿಗಾಗಿ ಸುಪ್ರೀಂಕೋರ್ಟ್ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದೆ. ಬುಧವಾರ ಲಕ್ಷ್ಮೀ ಪೂಜೆ ನೆರವೇರಿಸಿದ ಜನರು ಸಂಜೆ 5 ಗಂಟೆಯಿಂದಲೇ ಪಟಾಕಿ ಸಿಡಿಸಲು ಆರಂಭಿಸಿದರು. ಹಲವೆಡೆ ಮಂಗಳವಾರ ಮುಂಜಾನೆಯಿಂದಲೇ ಪಟಾಕಿ ಸದ್ದು ಕೇಳಲಾರಂಭಿಸಿತ್ತು.

ಕಳೆದ ಬಾರಿಗಿಂತ ಕಡಿಮೆ

ಕಳೆದ ಬಾರಿಯ ದೀಪಾವಳಿ ಸಂದರ್ಭದಲ್ಲಿ ಉಂಟಾದ ಮಾಲಿನ್ಯ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಕಳೆದ ಬಾರಿ ನಗರ ರೈಲು ನಿಲ್ದಾಣ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಸೇರಿ ಇನ್ನಿತರ ಕಡೆಗಳಲ್ಲಿ ಮಾಲಿನ್ಯ ಪ್ರಮಾಣ ಶೇ.200 ಹೆಚ್ಚಾಗಿತ್ತು. ಅದು ಈ ಬಾರಿ ಕಡಿಮೆಯಾಗಿದೆ. ದೊಮ್ಮಲೂರು ಕೇಂದ್ರದಲ್ಲಿ 103 ಮೈ.ಗ್ರಾಂ., ಕೆ.ಆರ್. ವೃತ್ತ 86, ಮೈಸೂರು ರಸ್ತೆ 69.4, ಖಾಜಿ ಸೊಣ್ಣೇನಹಳ್ಳಿ ಐಟಿಪಿಎಲ್ 86 ಮೈ.ಗ್ರಾಂ ಮಾಲಿನ್ಯ ದಾಖಲಾಗಿತ್ತು. ಉಳಿದಂತೆ ಯಶವಂತಪುರ, ಪೀಣ್ಯ ಹಾಗೂ ಐಟಿಪಿಎಲ್ ಕೈಗಾರಿಕಾ ಪ್ರದೇಶಗಳಲ್ಲಿ ನಿಗದಿಗಿಂತಲೂ ಕಡಿಮೆ ಪ್ರಮಾಣದ ಮಾಲಿನ್ಯ ದಾಖಲಾಗಿದೆ.

ಕಳೆದ 3 ದಿನಗಳಿಂದ 7 ಕೇಂದ್ರಗಳಲ್ಲಿ ಮಾಲಿನ್ಯ ತಪಾಸಣೆ ನಡೆಸಲಾಗಿದ್ದು, ನಗರ ರೈಲು ನಿಲ್ದಾಣ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಮಾಲಿನ್ಯ ಪ್ರಮಾಣ ಸಮಾಧಾನಕರವಾಗಿದೆ. ರೈಲು ನಿಲ್ದಾಣದ ಕೇಂದ್ರದಲ್ಲಿ ಮಾತ್ರ ಹೆಚ್ಚಿನ ಮಾಲಿನ್ಯ ಕಂಡುಬಂದಿದೆ.

| ಲಕ್ಷ್ಮಣ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

20ಕ್ಕೂ ಅಧಿಕ ಮಂದಿಗೆ ಗಾಯ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ 20ಕ್ಕೂ ಅಧಿಕ ಕುಟುಂಬಗಳಲ್ಲಿ ಅಂಧಕಾರ ತಲೆದೋರುವಂತೆ ಮಾಡಿದೆ. ಪಟಾಕಿ ಸಿಡಿಸುವಾಗ ಮುಂಜಾಗ್ರತಾ ಕ್ರಮ ವಹಿಸದಿರುವುದು ಅವಘಡಗಳಿಗೆ ಕಾರಣವಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯೊಂದರಲ್ಲಿಯೇ 12ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನಾರಾಯಣ ನೇತ್ರಾಲಯದಲ್ಲಿ 4, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 4 ಪ್ರಕರಣಗಳು ವರದಿಯಾಗಿವೆ. ಜತೆಗೆ, ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಾಗಿ ಹಲವರು ಚಿಕಿತ್ಸೆ ಪಡೆದಿದ್ದಾರೆ. ರಾಜಾಜಿನಗರದಲ್ಲಿ ಮೂರು ವರ್ಷದ ಬಾಲಕ ಪಟಾಕಿ ಹಚ್ಚಲು ಅಗರಬತ್ತಿ ಕೊಂಡೊಯ್ಯುವಾಗ ಕಣ್ಣಿಗೆ ಬೆಂಕಿ ಕಿಡಿ ತಗುಲಿದ್ದು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ.

ನೋಡಿದ್ದಕ್ಕೆ ಕಣ್ಣಿಗೆ ಹಾನಿ

ಬೊಮ್ಮನಹಳ್ಳಿಯ ದಿವ್ಯಾ(6) ಎಂಬ ಬಾಲಕಿ ಮನೆಯ ಮುಂದೆ ಪಟಾಕಿ ಸಿಡಿಯುತ್ತಿರುವುದನ್ನು ನೋಡುತ್ತಿದ್ದಾಗ ಎಡಗಣ್ಣಿನ ರೆಟಿನಾಕ್ಕೆ ಬೆಂಕಿಯ ಕಿಡಿ ತಾಕಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಮೂವರು ಒಳರೋಗಿಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಎಚ್​ಎಸ್​ಆರ್ ಲೇಔಟ್ ನಿವಾಸಿ ಮೊಹ್ಮದ್ ಗುಲಾಮ್ ರಬ್ಬಾನಿ (64) ಲಕ್ಷ್ಮೀ ಪಟಾಕಿ ಸಿಡಿಸುವಾಗ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ.

ಕಣ್ಣು ಕಳೆದುಕೊಂಡ ಬಾಲಕಿ

ಟ್ಯಾನರಿ ರಸ್ತೆಯ ನಿವಾಸಿ ಸಾದಿಕಾ ಬಾನು(13) ಪಾಲಿಗೆ ಈ ದೀಪಾವಳಿ ಶಾಶ್ವತ ಕತ್ತಲೆ ತಂದಿದೆ. ಹೂಕುಂಡಕ್ಕೆ ಬೆಂಕಿ ತಗುಲಿರುವ ಬಗ್ಗೆ ಪರಿಶೀಲನೆ ನಡೆಸುವಾಗ ಅದರ ಕಿಡಿ ಬಲಗಣ್ಣಿಗೆ ಸಿಡಿದಿದೆ. ಶಸ್ತ್ರಚಿಕಿತ್ಸೆ ನಡೆಸಿದ ಮಿಂಟೋ ಆಸ್ಪತ್ರೆ ವೈದ್ಯರು ದೃಷ್ಟಿ ಬರುವುದಿಲ್ಲ ಎಂದು ತಿಳಿಸಿದ್ದಾರೆ. ತಂದೆ ಮೆಹಮೂದ್ ಗುಜರಿ ಕೆಲಸ ಮಾಡುತ್ತಿದ್ದು, ಐವರು ಮಕ್ಕಳಲ್ಲಿ ಸಾದಿಕಾ ಬಾನು 4ನೇಯವಳು. ದೇವನಹಳ್ಳಿ ಬಳಿಯ ಜೋಗನಹಳ್ಳಿ ಗ್ರಾಮದ ಮೌನೇಶ್ (7) ಅಟಂಬಾಂಬ್ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಕಣ್ಣಿನ ಕಾರ್ನಿಯ ಹರಿದಿರುವುದರಿಂದ ಶಸ್ತ್ರಚಿಕಿತ್ಸೆ ನಡೆಸಬೇಕಿದ್ದು, ದೃಷ್ಟಿ ಬರುವ ಕುರಿತು ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.