ಗದಗದ ಮುಕ್ತಿ ಮಂದಿರಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುವ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಶಲ್ಯಕ್ಕೆ ಬೆಂಕಿ​

ಗದಗ: ಸಚಿವ ಡಿ.ಕೆ.ಶಿವಕುಮಾರ್​ ತಮ್ಮ ಹುಟ್ಟುಹಬ್ಬದ ನಿಮಿತ್ತ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿರುವ ಮುಕ್ತಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವೀರಗಂಗಾಧರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸುವ ವೇಳೆ ಡಿ.ಕೆ.ಶಿವಕುಮಾರ್ ಅವರ ಶಲ್ಯಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣ ಎಚ್ಚೆತ್ತುಕೊಂಡು ಹಿಂದೆ ಸರಿದು ಶಲ್ಯ ಸರಿಪಡಿಸಿಕೊಂಡರು.

ಇದೇ ವೇಳೆ ಮುಕ್ತಿಮಂದಿರದ ವಿಮಲ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಡಿಕೆ ಶಿವಕುಮಾರ್​ ಅವರಿಗೆ, ಸ್ವಾಮೀಜಿ ತಮ್ಮ ಕೈಯಲ್ಲಿದ್ದ ಉಂಗುರ ತೆಗೆದು ಅವರ ಬೆರಳಿಗೆ ಹಾಕಿ ಆಶೀರ್ವಾದ ಮಾಡಿದರು.

ಮುಕ್ತಿ ಮಂದಿರದಲ್ಲಿ ದರ್ಶನ‌ ಪಡೆದ ಬಳಿಕ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್​, ಇದೊಂದು ಪವಿತ್ರವಾದ ಕ್ಷೇತ್ರವಾಗಿದ್ದು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಕ್ಷೇತ್ರವಾಗಿದೆ. ದೇವಸ್ಥಾನಕ್ಕೆ ಆಗಮಿಸಿ ನನ್ನ ಇಷ್ಟಾರ್ಥಗಳನ್ನು ಕೇಳಿಕೊಂಡಿದ್ದೇನೆ. ಕುಂದಗೋಳ ಕ್ಷೇತ್ರದ ಜನ ನಮ್ಮನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು. (ದಿಗ್ವಿಜಯ ನ್ಯೂಸ್​)