ಬೀರೂರು ಅಮೃತ್ ಕಾವಲ್​ಗೆ ಬೆಂಕಿ

ಬೀರೂರು: ಪಟ್ಟಣ ಸಮೀಪದ ಅಮೃತ್​ವುಹಲ್ ಕಾವಲು ಪ್ರದೇಶದಲ್ಲಿ ಮಂಗಳವಾರ ಕಾವಲಿನ ಹುಲ್ಲಿಗೆ ತಗುಲಿದ್ದ ಬೆಂಕಿ ಯುವಕರ ಸಮಯಪ್ರಜ್ಞೆಯಿಂದ ಶಮನಗೊಂಡಿದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಕಾವಲಿನಲ್ಲಿ 900 ಎಕರೆಗೂ ಹೆಚ್ಚಿನ ಪ್ರದೇಶವಿದೆ. ಹಲವು ಜಾತಿಯ ಕಾಡು ಮರಗಳು, ಕುರುಚಲು ಗಿಡಗಳು, ನವಿಲು, ಕಡವೆಗಳಿವೆ. ಬೆಂಕಿ ಅನಾಹುತ ಸಂಭವಿಸಿದರೆ ಹೆಚ್ಚಿನ ಅನಾಹುತವಾಗುತ್ತಿತ್ತು. ಪಟ್ಟಣದ ಛಾಯಾಗ್ರಾಹಕ ಸಂಘದ ಯುವಕರು ಕಾವಲು ಚೌಡಮ್ಮ ದೇವಿಗೆ ಪೂಜೆ ಸಲ್ಲಿಸುತ್ತಿರುವ ಸಂದರ್ಭ ಬೆಂಕಿಯನ್ನು ಗಮನಿಸಿದ್ದಾರೆ. ತಕ್ಷಣವೇ ಕಡೂರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿ ನಂದಿಸಲು ಕ್ರಮ ಕೈಗೊಂಡಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಬಸವರಾಜ್, ದೀಕ್ಷಿತ್ ನಾಯಕ್, ಶಿವಪ್ರಸಾದ್, ದೇವರಾಜಯ್ಯ ಹಾಗೂ ಹರೀಶ್ ಯುವಕರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ.