7 ಗುಡಿಸಲು, 12 ಬಣವೆ ಭಸ್ಮ

ಕೆರೂರ: ಸಮೀಪದ ಮುಷ್ಠಿಗೇರಿ ಗ್ರಾಮದ ಹೊರವಲಯದ ಗುಡ್ಡದಲ್ಲಿ ಸೋಮವಾರ ಸಂಜೆ ಆಕಸ್ಮಿಕ ಬೆಂಕಿಗೆ ಏಳು ಗುಡಿಸಲು, 12 ಬಣವೆ ಭಸ್ಮಗೊಂಡು ಎರಡು ಎತ್ತುಗಳು ಗಾಯಗೊಂಡಿವೆ.

ಗುಡ್ಡದ ಮೇಲೆ ದನಕರುಗಳನ್ನು ಕಟ್ಟಲು ಹಾಗೂ ಕೃಷಿ ಸಲಕರಣೆಗಳನ್ನು ಇಡಲು ಏಳು ಗುಡಿಸಲುಗಳನ್ನು ನಿರ್ವಿುಸಲಾಗಿತ್ತು. ಬೆಳಗ್ಗೆ ದನಕರುಗಳಿಗೆ ಮೇವು ಹಾಕಿ ರೈತರು ತಮ್ಮ ಹೊಲಗದ್ದೆಗಳಿಗೆ ತೆರಳಿದ್ದರು. ಅದೇ ಸಮಯದಲ್ಲಿ ಆಕಸ್ಮಿಕವಾಗಿ ಜೋಳದ ಬಣವೆ ಹಾಗೂ ಗುಡಿಸಲುಗಳಿಗೆ ಬೆಂಕಿ ತಗುಲಿದೆ. ದಟ್ಟ ಹೊಗೆ ಕಂಡು ಗುಡ್ಡದ ಮೇಲೆ ಗ್ರಾಮಸ್ಥರು ತೆರಳಿದಾಗ ಘಟನೆ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರಾದರೂ ಅಷ್ಟರಲ್ಲಿ ಎಲ್ಲವೂ ಸುಟ್ಟು ಕರಕಲಾಗಿತ್ತು. ಘಟನೆಯಲ್ಲಿ ಎರಡು ಎತ್ತುಗಳು ತೀವ್ರ ಗಾಯಗೊಂಡು ನರಳುತ್ತಿರುವುದನ್ನು ಕಂಡು ಗ್ರಾಮಸ್ಥರು ಮಮ್ಮಲ ಮರುಗಿದರು.

ಗ್ರಾಮದ ದೇವರಾಜ ಅಖಂಡನ್ನವರ, ಸಾಲೋಮನ ತಳವಾರ, ಚಾಂದಸಾಬ್ ನದಾಫ್, ತಿಪ್ಪಣ್ಣ ಹಡಪದ, ರಾಯಪ್ಪ ನಂದಿಕೇಶ್ವರ, ತಿಪ್ಪಣ್ಣ ಕೊನೇರಿ, ಶಾಂತಕುಮಾರ ತಳವಾರ ಅವರಿಗೆ ಸೇರಿದ ಗುಡಿಸಲುಗಳು, ಬಣವೆ ಭಸ್ಮವಾಗಿವೆ. ಘಟನಾ ಸ್ಥಳಕ್ಕೆ ಬಾದಾಮಿ ತಹಸೀಲ್ದಾರ್ ಎಸ್.ಎಸ್. ಇಂಗಳೆ, ತಾಲೂಕು ಪಶು ವೈದ್ಯಾಧಿಕಾರಿ ಶ್ರೀಕಾಂತ ಸಬನಿಸ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕೆರೂರ ಪಿಎಸ್​ಐ ಚಂದ್ರಶೇಖರ ಹೆರಕಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.