ಹೆಚ್ಚುತ್ತಿದೆ ಬೆಂಕಿ ಅವಘಡ

ಮಂಗಳೂರು: ಬೇಸಿಗೆ ಆರಂಭದಲ್ಲೇ ಪ್ರತಿದಿನ ಬೆಂಕಿ ಅವಘಡ ಪ್ರಕರಣಗಳು ದಾಖಲಾಗುತ್ತಿದ್ದು, ದಿನಕ್ಕೆ 10ಕ್ಕಿಂತಲೂ ಅಧಿಕ ‘ಬೆಂಕಿ ಬಿದ್ದಿದೆ’ ಎನ್ನುವ ಕರೆಗಳು ಅಗ್ನಿಶಾಮಕದಳ ಕಚೇರಿಗೆ ಬರಲಾರಂಭಿಸಿವೆ.
ಬೆಂಕಿಯ ಕಿಡಿ ಬಿದ್ದರೂ ಜ್ವಾಲೆಗಳಾಗಿ ದಿಗಂತದೆತ್ತರಕ್ಕೆ ವ್ಯಾಪಿಸುತ್ತಿದೆ. ಇದರಿಂದ ಉಂಟಾಗುವ ಅವಾಂತರ ತಡೆಯಲು ಮುನ್ನೆಚ್ಚರಿಕೆಯೊಂದೇ ಪರಿಹಾರ. ಭೂಮಿಯಲ್ಲಿ ತಂಪು ಹವೆ ಕಡಿಮೆಯಾಗುವ ಫೆಬ್ರವರಿಯಿಂದ ಮೇ ತಿಂಗಳ ತನಕ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಮನುಷ್ಯನ ನಿರ್ಲಕ್ಷೃ, ಮೋಜು, ಉಪೇಕ್ಷೆ ಹಾಗೂ ಕೆಲ ಬಾರಿ ಉದ್ದೇಶಪೂರ್ವಕ ಕೃತ್ಯಗಳಿಂದ ಬೀಳುವ ಎಲ್ಲೆಡೆ ವ್ಯಾಪಿಸಿ ಅಪಾರ ನಷ್ಟಕ್ಕೆ ಕಾರಣವಾಗುತ್ತಿದೆ. ನಿರ್ಲಕ್ಷೃದಿಂದ ಸೇದಿ ಎಸೆದ ಬೀಡಿ- ಸಿಗರೇಟು ಕೆಲವೊಮ್ಮೆ ಉಂಟು ಮಾಡುವ ನಷ್ಟ ಊಹನೆಗೂ ನಿಲುಕದ್ದು. ಗಾಂಜಾ ಬೆಳೆಯುವವರು, ಇತರ ಅಕ್ರಮ ಚಟುವಟಿಕೆ ನಡೆಸುವವರು ಕೂಡ ಅಧಿಕಾರಿಗಳ ಹಾದಿ ತಪ್ಪಿಸಲು ಉದ್ದೇಶಪೂರ್ವಕ ಕಾಡಿಗೆ ಬೆಂಕಿ ಹಚ್ಚುವುದುಂಟು. ಒಣ ಹುಲ್ಲಿಗೆ ಬೆಂಕಿ ನೀಡುವುದರಿಂದ ಆ ಪ್ರದೇಶದಲ್ಲಿ ಮುಂದಿನ ವರ್ಷ ಹುಲ್ಲಿನ ಬೆಳೆ ಸಮೃದ್ಧವಾಗಿ ಬರುವುದು ಎಂಬ ನಂಬಿಕೆ ಕೂಡ ಹೆಚ್ಚಿನವರಲ್ಲಿದೆ. ಪ್ರವಾಸಿಗರು ಮೋಜಿಗಾಗಿ ಕಾಡಿನಲ್ಲಿ ಬೆಂಕಿ ಹಾಕಿ ಅದನ್ನು ಹಾಗೆಯೇ ಉಪೇಕ್ಷಿಸಿ ಹೋಗುವುದು ಕೂಡ ಸಮಸ್ಯೆ ಸೃಷ್ಟಿಸುತ್ತದೆ.

 ಏನು ಮಾಡಬಹುದು ?: ಸರ್ಕಾರದ ಗ್ರಾಮ ಅರಣ್ಯ ಸಮಿತಿ ಹಾಗೂ ಸಾರ್ವಜನಿಕ ಸಂಘಸಂಸ್ಥೆಗಳ ಮೂಲಕ ಜನಜಾಗೃತಿ ಮೂಡಿಸುವುದು. ಘಟನೆ ನಡೆದ ತಕ್ಷಣ ಬೆಂಕಿಯಿಂದ ಕನಿಷ್ಠ 50 ಮೀ. ದೂರದಲ್ಲಿ ಬಿದ್ದಿರುವ ತರಗೆಲೆ, ಒಣಗಿದ ವಸ್ತುಗಳನ್ನು ದೂರ ಸರಿಸಿ ದಾರಿ ಮಾಡುವುದು. ಇದರಿಂದ ಬೆಂಕಿ ಹರಡುವುದು ನಿಯಂತ್ರಿಸಲು ಸಾಧ್ಯ. ಅರಣ್ಯ ಇಲಾಖೆ ಅಧಿಕಾರಿ ಅಥವಾ ಸಿಬ್ಬಂದಿಯನ್ನು ತಕ್ಷಣ ಸಂಪರ್ಕಿಸುವುದು. ಅರಣ್ಯ ಇಲಾಖೆ ಸಿಬ್ಬಂದಿ ಬಲವರ್ಧನೆ ಮಾಡುವುದರಿಂದಲೂ ಪ್ರಯೋಜನ ದೊರೆಯಬಹುದು ಎನ್ನುತ್ತಾರೆ ತಜ್ಞರು.

ಅಗ್ನಿ ಶಾಮಕದಳದ ಅಧಿಕಾರಿಗಳು ಏನೆನ್ನುತ್ತಾರೆ?: ಜಿಲ್ಲೆಯಲ್ಲಿ ಪ್ರತಿವರ್ಷ ಜನವರಿಯಿಂದ ಮೇ ತನಕ ಅಗ್ನಿಶಾಮಕ ದಳಕ್ಕೆ ನಿರ್ಣಾಯಕ ತಿಂಗಳುಗಳು. 5-6 ತಿಂಗಳು ಬೀಳುವ ಮಳೆಗೆ ಹುಲುಸಾಗಿ ಬೆಳೆಯುವ ಹುಲ್ಲುಗಾವಲು, ಬಳಿಕ ಒಣಗಲು ಆರಂಭವಾಗುತ್ತವೆ. ಈ ಹುಲ್ಲು ಕತ್ತರಿಸಿ ತೆಗೆಯುವ ಬದಲು ಕೆಲವರು ಬೆಂಕಿ ಹಾಕಿ ಸುಡುತ್ತಾರೆ. ಇದು ಎಲ್ಲೆಡೆ ವ್ಯಾಪಿಸಿ ಅಪಾರ ಹಾನಿಯುಂಟಾಗುತ್ತದೆ. ಜತೆಗೆ ಬೀಡಿ-ಸಿಗರೇಟ್ ಸೇದಿ ಎಸೆದ ಬೆಂಕಿ, ಕಿಡಿಗೇಡಿಗಳು ಹಚ್ಚುವ ಬೆಂಕಿಯಿಂದಲೂ ಅಗ್ನಿ ಅವಘಡಗಳು ಸಂಭವಿಸುತ್ತವೆ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶಗಳಿಗೆ ಬೆಂಕಿ ಬೀಳುವುದಕ್ಕಿಂತ ಹೆಚ್ಚಾಗಿ ಹುಲ್ಲುಗಾವಲುಗಳು ಬೆಂಕಿಗೆ ಆಹುತಿಯಾಗುತ್ತಿವೆ. ದೇರಳಕಟ್ಟೆ, ಕೊಣಾಜೆ, ವಿಟ್ಲ, ಪುತ್ತೂರು, ಮೂಡುಬಿದಿರೆ ಉಪ್ಪಿನಂಗಡಿ ಭಾಗದಲ್ಲಿ, ಚಾರ್ಮಾಡಿ, ಶಿರಾಡಿ ಘಾಟಿ, ಬಿಸಿಲೆ ಘಾಟಿ ಹಾಗೂ ಸುಬ್ರಹ್ಮಣ್ಯ ಆಸುಪಾಸಿನ ಕಾಡುಗಳಲ್ಲಿ ಪ್ರತಿವರ್ಷ ಅಗ್ನಿ ಅವಘಡಗಳು ಸಂಭವಿಸುತ್ತಿರುತ್ತವೆ. ಪ್ರತಿ ವರ್ಷ ಅಗ್ನಿ ಅನಾಹುತ ಸಂಭವಿಸುವ ಪ್ರದೇಶದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಸಂಘ-ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಟಿ.ಎನ್. ಶಿವಶಂಕರ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳದ ಪೂರ್ವ ತಯಾರಿ: ಅಗ್ನಿ ಅವಘಡಗಳ ಮುನ್ನೆಚ್ಚರಿಕೆ ಕುರಿತು ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಅಗ್ನಿಶಾಮಕ ದಳ ವತಿಯಿಂದ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಭಾರಿ ಬಿಸಿಲಿನ ಹಿನ್ನೆಲೆಯಲ್ಲಿ ಮುಖ್ಯವಾಗಿ ಎಲ್‌ಪಿಜಿ ಟ್ಯಾಂಕರ್‌ಗಳು ತಂಗುವ ಸುರತ್ಕಲ್‌ನ ಬಾಳ ಪ್ರದೇಶದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ಬಹುಮಹಡಿ ಕಟ್ಟಡಗಳಲ್ಲಿ, ಹೋಟೆಲ್, ಲಾಡ್ಜ್, ಹಾಸ್ಪಿಟಲ್, ಶಾಲೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಿ ಅಗ್ನಿ ಅವಘಡ ವೇಳೆ ಕೈಗೊಳ್ಳಬೇಕಾದ ಕ್ರಮದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದಾಗ ಕರಾವಳಿ ಭಾಗದಲ್ಲಿ ಹುಲ್ಲುಗಾವಲು-ಕುರುಚಲು ಪೊದೆಗಳು ಹೆಚ್ಚು. ಹುಲ್ಲು ಬೆಳೆಯದಂತೆ ಆಗಾಗ್ಗೆ ಕತ್ತರಿಸುವುದರಿಂದ ಬೆಂಕಿ ಬೀಳುವುದನ್ನು ತಪ್ಪಿಸಬಹುದು. ಬೆಂಕಿ ಅನಾಹುತಗಳು ಉಂಟಾದಾಗ ತಕ್ಷಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಂಚಾಯಿತಿ ಮಟ್ಟದಲ್ಲಿ ತಂಡಗಳನ್ನು ರಚಿಸಿ, ಆರಂಭಿಕ ಹಂತದಲ್ಲಿ ಬೆಂಕಿಯನ್ನು ತಡೆಯುವ ಪ್ರಯತ್ನ ಮಾಡಬೇಕು. ಕೆಲವು ಗ್ರಾಮಾಂತರ ಭಾಗದಲ್ಲಿ ರಸ್ತೆ ಸಮಸ್ಯೆಯಿಂದಾಗಿಯೂ ಅನಾಹುತ ಸಂಭವಿಸುವ ಸ್ಥಳಕ್ಕೆ ತಲುಪುವುದು ಕಷ್ಟ.
ಟಿ.ಎನ್.ಶಿವಶಂಕರ್
ಮುಖ್ಯ ಅಗ್ನಿಶಾಮಕ ಅಧಿಕಾರಿ, ಮಂಗಳೂರು ಪ್ರಾಂತ್ಯ