ಅಡುಗೆ ಬಗೆ ಬಗೆ ರುಚಿ ಹಲವು ಬಗೆ..!


ಶ್ರೀಪತಿ ಹೆಗಡೆ ಹಕ್ಲಾಡಿ ವಂಡ್ಸೆ
ಗ್ಯಾಸ್ ಸಿಲಿಂಡರ್ ಬಂದಿಲ್ಲ.. ಬೆಲೆ ಹೆಚ್ಚಾಯಿತು ಎಂಬ ಗೊಣಗಾಟವಿಲ್ಲ. ಒಲೆ ಮುಂದೆ ಕೂತು ಹೊಗೆಗೆ ಕಣ್ಣು ಮೂಗು ಒಡ್ಡ ಬೇಕಿಲ್ಲ. ಅಡುಗೆ ಮಾಡುವ ಕಷ್ಟ ಎಂತಹದ್ದು ಎಂದು ಬಾಣಸಿಗರಿಗೇ ಗೊತ್ತು..!
ಅಡುಗೆ ಮಾಡುವ ಕಷ್ಟ ಹಾಗೂ ಖುಷಿ ಎರಡೂ ಅನುಭವವಾಗುವುದು ನಾವೇ ಬಾಣಸಿಗರಾದಾಗ ಮಾತ್ರ. ಅಡುಗೆ ಮಾಡಲು, ಅಲಂಕರಿಸಿ ಬಡಿಸಲು ಇರುವ ಪರಿಶ್ರಮ, ಹಾಗೆಯೇ ಬೇರೆಯವರು ಅದನ್ನು ತಿಂದು ತೃಪ್ತಿ ಪಟ್ಟಾಗ ಸಿಗುವ ಸಾರ್ಥಕತೆ ಅನುಭವಿಸಿಯೇ ತಿಳಿಯಬೇಕು.

ವಂಡ್ಸೆ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಅಡುಗೆ ಅನುಭವ ಪಡೆಯಲು ಬೆಂಕಿ ರಹಿತ ಅಡುಗೆ ತಯಾರಿ ಸ್ಪರ್ಧೆ ಒಂದು ಅವಕಾಶ ನೀಡಿದ್ದು ಸುಳ್ಳಲ್ಲ.

ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ಸಮಾಜ ಶಾಸ್ತ್ರಗಳ ಬದಲಿಗೆ ಪಾಕಶಾಸ್ತ್ರ ತಲೆ ತುಂಬಾ ತುಂಬಿಕೊಂಡು, ಪೆನ್ನು ಪುಸ್ತಕಗಳ ಬದಲಿಗೆ ಸೌಟು, ತಟ್ಟೆ, ಬೋಗುಣಿ ಕೈಯಲ್ಲಿ ಹಿಡಿದು ವಿದ್ಯಾರ್ಥಿಗಳು ಸಜ್ಜಾದರು. ತಲಾ ಮೂರು ವಿದ್ಯಾರ್ಥಿಗಳ ಒಟ್ಟು 11 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅವರಿಗಿದ್ದ ಸವಾಲು ಬೆಂಕಿ ಉಪಯೋಗಿಸದೇ ಅಡುಗೆಯಾಗಬೇಕು, ಆಕರ್ಷಕವಾಗಿ ಪ್ರದರ್ಶಿಸಬೇಕು ಹಾಗೂ ಅವು ನೋಡುವಾಗ ಹಾಗೂ ತಿನ್ನುವಾಗ. ಸ್ಪರ್ಧೆಯ ಅವಧಿ ಮುಗಿದಾಗ ಸುಮಾರು 150 ಬಗೆಯ ಖಾದ್ಯಗಳು ತಯಾರಾಗಿದ್ದವು. ಲಿಂಬೆ, ಕಿತ್ತಳೆ, ಸೇಬು, ಕ್ಯಾರೆಟ್, ಬೀಟ್‌ರೂಟ್, ಎಳ್ಳು, ಜೀರಿಗೆ, ಹೆಸರುಕಾಳು ಮುಂತಾದವುಗಳಿಂದ ತಯಾರಿಸಿದ ಜ್ಯೂಸ್‌ಗಳು, ಬಗೆ ಬಗೆ ಸೊಪ್ಪುಗಳ ಚಟ್ನಿ, ಮಂಡಕ್ಕಿ ಉಪ್ಕರಿ, ಬಿಸ್ಕೆಟ್ ಉಪ್ಕರಿ, ತರಕಾರಿ ಸಲಾಡ್‌ಗಳು, ಸ್ಯಾಂಡ್‌ವಿಚ್‌ಗಳು, ಬಿಸ್ಕೆಟ್ ಲಾಡುಗಳು, ಹೀಗೆ ವಿದ್ಯಾರ್ಥಿಗಳ ಅಡುಗೆ ಕೌಶಲ ಹಾಗೂ ಕ್ರಿಯಾಶೀಲತೆ ಪ್ರದರ್ಶಿಸುವ ತರಹೇವಾರಿ ಐಟಂಗಳಿದ್ದವು. ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಹಾಗೂ ಅಚ್ಚುಕಟ್ಟುತನ ಮತ್ತು ಆಕರ್ಷಕವಾಗಿ ಪ್ರದರ್ಶಿಸುವ ಜಾಣ್ಮೆ ನೋಡುಗರ ಗಮನ ಸೆಳೆಯಿತು.

ಓರಿಯನ್ ಲಾಡು ಮತ್ತು ಮೆನು ಕಾರ್ಡ್: ಮಹಮ್ಮದ್ ಆಶಿಕ್, ಮಂಜುನಾಥ ಮತ್ತು ಜೀವನ್ ತಂಡದ ಮೆನು ಕಾರ್ಡ್ ಹಾಗೂ ಐಟಂ ಕಾರ್ಡ್‌ಗಳಲ್ಲಿ ಖಾದ್ಯಗಳ ವಿವರ ನೀಡಿದ್ದು ವಿಶೇಷವಾಗಿತ್ತು. ಇದೇ ತಂಡ ಬಗೆ ಬಗೆಯ ಬಿಸ್ಕೆಟ್ ಲಾಡು ತಯಾರಿಸಿದ್ದು, ಅವುಗಳಲ್ಲಿ ಓರಿಯನ್ ಲಾಡು ಮುಖ್ಯ ಆಕರ್ಷಣೆಯಾಗಿತ್ತು. ಓರಿಯನ್ ಬಿಸ್ಕಟ್ ಪುಡಿಮಾಡಿ ತಯಾರಿಸಿದ ಈ ಬಿಸ್ಕೆಟ್ ಕಡುಗಪ್ಪು ಬಣ್ಣ ಹಾಗೂ ವಿಭಿನ್ನ ರುಚಿ ಹೊಂದಿತ್ತು.