ಮನೆ ಬೆಂಕಿಗಾಹುತಿಯಾಗಿ ಹಾನಿ

ಮೂಡುಬಿದಿರೆ: ಒಂಟಿಕಟ್ಟೆ ಶಾಲೆ ಬಳಿ 5 ಸೆಂಟ್ಸ್ ಕಾಲನಿಯಲ್ಲಿರುವ ತಾಹೀರಬಾನು ಎಂಬವರಿಗೆ ಸೇರಿದ ಮನೆ ಶನಿವಾರ ನಸುಕಿನ ಜಾವ ಬೆಂಕಿಗಾಹುತಿಯಾಗಿ 3 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದೆ.
ಬಟ್ಟೆಬರೆ, 4 ಸಾವಿರ ರೂ.ನಗದು, ಗೃಹಪಯೋಗಿ ವಸ್ತುಗಳು, ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾಗಿದೆ. ಮನೆ ಬಾಗಿಲು ಸೇರಿದಂತೆ ಮರದ ವಸ್ತುಗಳು ಕೂಡ ಭಸ್ಮವಾಗಿದೆ.

ತಾಹೀರಬಾನು ಅವರ ಸಂಬಂಧಿ ಸಾದೀಕ್ ಎಂಬುವರು ಈ ಮನೆಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು. ಸಾದೀಕ್ ಅವರ ಪತ್ನಿ ಅತೀಜಮ್ಮ ಅನಾರೋಗ್ಯದಿಂದ 50 ದಿನದ ಹಿಂದೆ ಮೃತಪಟ್ಟಿದ್ದರು. ಪತ್ನಿ ನಿಧನ ಬಳಿಕ ಅವರು ತಮ್ಮ ಮಕ್ಕಳಾದ ಸಫಾ ಬಾನು ಹಾಗೂ ಸಂಬ್ರೀನಾ ಬಾನು ಜತೆ ಕೋಟೆಬಾಗಿಲಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ 8 ಗಂಟೆಗೆ ಸಾದಿಕ್ ಅವರು ಒಂಟಿಕಟ್ಟೆಯ ಮನೆಯಲ್ಲಿ ಅಗರಬತ್ತಿ ಹಚ್ಚಿ, ಬಳಿಕ ಕೋಟೆಬಾಗಿಲಿಗೆ ತೆರಳಿದ್ದರು. ಮನೆಗೆ ಎರಡು ತಿಂಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಲು ಸಾಧ್ಯವಿಲ್ಲ ಎನ್ನಲಾಗಿದೆ.

ಶನಿವಾರ ಬೆಳಗ್ಗೆ 5 ಗಂಟೆ ವೇಳೆಗೆ ಪಕ್ಕದ ಮನೆಯ ಸಲೀಂ ಎಂಬುವರು ನೋಡಿದಾಗ ಮನೆಗೆ ಬೆಂಕಿ ಆವರಿಸಿರುವುದು ಗಮನಕ್ಕೆ ಬಂದಿದೆ. ಸ್ಥಳೀಯರ ಜತೆಗೂಡಿ ಬೆಂಕಿ ನಂದಿಸಲು ಯತ್ನಿಸಿದರೂ, ಅದಾಗಲೇ ಮನೆಯಲ್ಲಿದ್ದ ಸೊತ್ತುಗಳು ಭಸ್ಮವಾಗಿವೆ.

Leave a Reply

Your email address will not be published. Required fields are marked *