More

  ಸೌತ್ ಇಂಡಿಯಾ ಪೇಪರ್ ಮಿಲ್ಸ್ ಗೋದಾಮಿಗೆ ಬೆಂಕಿ

  ನಂಜನಗೂಡು: ತಾಲೂಕಿನ ಚಿಕ್ಕಯ್ಯನಛತ್ರದಲ್ಲಿರುವ ಸೌತ್ ಇಂಡಿಯಾ ಪೇಪರ್ ಮಿಲ್ಸ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಒಳಗೆ ಇರಿಸಲಾಗಿದ್ದ ದಾಸ್ತಾನುಗಳು ಹಾಗೂ ಯಂತ್ರೋಪಕರಣಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

  ಕಾರ್ಖಾನೆಯ ಒಳ ಆವರಣದಲ್ಲಿರುವ ಯಾವುದೇ ಕಾರ್ಯಚಟುವಟಿಕೆಯಿಲ್ಲದ ಘಟಕವೊಂದರಲ್ಲಿ ಪೇಪರ್ ಬಂಡಲ್ಸ್ ಸೇರಿದಂತೆ ಯಂತ್ರಗಳನ್ನು ಇರಿಸಲಾಗಿತ್ತು. ಶನಿವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರ್ಮಿಕರು ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದ್ದಾರೆ. ಮೈಸೂರು ಹಾಗೂ ನಂಜನಗೂಡು ಘಟಕದಿಂದ 5 ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಸಂಜೆ 5 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಕೊನೆಗೂ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

  ಘಟಕದ ಒಳಾವರಣದಲ್ಲಿ ಇಟ್ಟಿದ್ದ ಪೇಪರ್ ಬಂಡಲ್ಸ್ ಹಾಗೂ ಇತರ ಯಂತ್ರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಮೇಲ್ನೋಟಕ್ಕೆ ಶಂಕೆ ವ್ಯಕ್ತಪಡಿಸಲಾಗಿದೆ. ತನಿಖೆಯಿಂದಷ್ಟೇ ಸತ್ಯಾಂಶ ಹೊರಬೀಳಬೇಕಿದೆ.

  ಘಟನಾ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಅಧಿಕಾರಿಗಳು ಭೇಟಿ ನೀಡಿದ್ದರು. ಎಲ್ಲವನ್ನೂ ಪರಿಶೀಲನೆ ನಡೆಸಿದ ನಂತರ ಅಂದಾಜು ನಷ್ಟ ತಿಳಿಯಲಿದ್ದು, ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಕಾರ್ಖಾನೆ ಆಡಳಿತ ಮಂಡಳಿ ತಿಳಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts