ಶಿವಮೊಗ್ಗ: ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ರನ್‌ವೇಗೆ ಅನತಿ ದೂರದಲ್ಲಿ ಕಾಣಿಸಿಕೊಂಡ ಬೆಂಕಿ ಕೆಲ ಸಮಯದಲ್ಲೇ ರನ್‌ವೇಯಿಂದ ತುಂಬ ದೂರದಲ್ಲಿರುವ ಕುರುಚಲು ಹುಲ್ಲು ಬೆಳೆದಿರುವ ಪ್ರದೇಶಕ್ಕೂ ವ್ಯಾಪಿಸಿತು.
ಬೆಂಕಿ ಕಾಣಿಸಿಕೊಳ್ಳುತ್ತಲೇ ಏರ್‌ಪೋರ್ಟ್‌ನಲ್ಲಿ ಅಪಾಯದ ಎಚ್ಚರಿಕೆ ಗಂಟೆ ಮೊಳಗಿತು. ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದವು. ಅಗ್ನಿಶಾಮಕ ಸಿಬ್ಬಂದಿ ಎಲ್ಲ ಉಪಕರಣಗಳೊಂದಿಗೆ ಬೆಂಕಿ ನಂದಿಸುವ ಕಾರ್ಯಕ್ಕೆ ಸನ್ನದ್ಧರಾದರು. ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ನಂದಿಸಲಾಯಿತು.
ಇದೆಲ್ಲ ಕಂಡುಬಂದಿದ್ದು ಸೋಮವಾರ ನಡೆಸಿದ ಕಲ್ಪಿತ ಅಗ್ನಿ ಅವಘಡದಲ್ಲಿ. ವಿಮಾನವೊಂದು ಅಪಘಾತಕ್ಕೀಡಾಗಿ ಧರೆಗುರುಳಿದಾಗ ಯಾವ ರೀತಿ ಕಾರ್ಯಾಚರಣೆ ನಡೆಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಲು ಈ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಸಿಬ್ಬಂದಿಯ ಸಮಯ ಪಾಲನೆ, ಬುದ್ಧಿವಂತಿಕೆ, ಪರಿಸ್ಥಿತಿಯನ್ನು ಅವಲೋಕಿಸಿ ಅದಕ್ಕೆ ಸೂಕ್ತವಾಗಿ ಸ್ಪಂದಿಸುವುದು ಈ ಪ್ರಾತ್ಯಕ್ಷಿಕೆಯ ಉದ್ದೇಶವಾಗಿತ್ತು. ಜತೆಗೆ ಅಗ್ನಿ ಅವಘಡ ಸಂಭವಿಸಿದ ವೇಳೆ ಅದನ್ನು ನಿಯಂತ್ರಿಸಲು ಏರ್‌ಪೋರ್ಟ್‌ನಲ್ಲಿ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ಸಿಬ್ಬಂದಿಗೆ ತಿಳಿಸುವುದು ಇದರ ಮುಖ್ಯ ಗುರಿಯಾಗಿತ್ತು.
ಅಪಘಾತದಲ್ಲಿ ಗಾಯಗೊಂಡವರನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊಯ್ಯುವುದು, ಕೆಲವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡುವುದೂ ಈ ಪ್ರಾತ್ಯಕ್ಷಿಕೆಯ ಭಾಗವಾಗಿತ್ತು. ಎಲ್ಲ ಏರ್‌ಪೋರ್ಟ್‌ಗಳಲ್ಲೂ ಇಂತಹ ಪ್ರಾತ್ಯಕ್ಷಿಕೆಗಳನ್ನು ವರ್ಷಕ್ಕೊಮ್ಮೆ ನಡೆಸಬೇಕೆಂದು ಡಿಜಿಸಿಎ ಮಾರ್ಗಸೂಚಿಯೇ ಇದೆ. ಹೀಗಾಗಿ ಕಲ್ಪಿತ ಅಗ್ನಿ ಅವಘಡಕ್ಕೆ ಶಿವಮೊಗ್ಗ ಏರ್‌ಪೋರ್ಟ್ ಸಾಕ್ಷಿಯಾಯಿತು.
ಅಗ್ನಿಶಾಮಕ ಇಲಾಖೆ, ಏರ್‌ಪೋರ್ಟ್‌ನ ಭದ್ರತಾ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳು, ವಿವಿಧ ವಿಮಾನಯಾನ ಸಂಸ್ಥೆಗಳ ಪ್ರಮುಖ ಅಧಿಕಾರಿಗಳು ಇದ್ದರು.