ಗೊಳಸಂಗಿ: ಸಮೀಪದ ರಾಷ್ಟ್ರೀಯ ಹೆದ್ದಾರಿ-50 ರ ಕೂಡಗಿ ಕ್ರಾಸ್ ಬಳಿಯ ಸಂಧು ದಾಬಾ ಬಳಿ ಶುಕ್ರವಾರ ಮಧ್ಯಾಹ್ನ ಚಲಿಸುತ್ತಿದ್ದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಹೊತ್ತಿಕೊಂಡು ಭಾಗಶಃ ಸುಟ್ಟು ಭಸ್ಮವಾಗಿದೆ.
ದಿಢೀರೆಂದು ಹೊತ್ತಿಕೊಂಡ ಬೆಂಕಿ ಕಾಡ್ಗಿಚ್ಚಿನಂತೆ ಉರಿಯುತ್ತಿದ್ದರೂ ಲಾರಿ ಚಾಲಕನಿಗೆ ಗೊತ್ತಿರಲಿಲ್ಲ. ಕೂಡಲೇ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದಾಗ ಲಾರಿ ನಿಲ್ಲಿಸಿ ಚಾಲಕ ಹೊರ ಬಂದಿದ್ದಾರೆ.
ಲಾರಿ ಪಕ್ಕದಲ್ಲೇ ಇದ್ದ ಧೋಬಿಘಾಟ್‌ನಲ್ಲಿನ ನೀರನ್ನೇ ಬಳಸಿ ಸ್ಥಳೀಕರ ನೆರವಿನಿಂದ ಬೆಂಕಿ ನಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಯಿಂದ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ.
ಮಹಾರಾಷ್ಟ್ರ ಮೂಲದ ಐಶರ್ ಗೂಡ್ಸ್ ಲಾರಿ ಬೆಂಗಳೂರಿನಿಂದ ಮುಂಬೈಗೆ ಗೃಹ ಸಾಮಗ್ರಿ ಹೊತ್ತು ಸಾಗುತ್ತಿತ್ತು.
ಈ ವೇಳೆ ಲಾರಿ ಹಿಂಬದಿ ಇರಿಸಲಾಗಿದ್ದ ಬ್ಯಾಟರಿ ಇನ್ವರ್ಟರ್ ಪಕ್ಕದಲ್ಲೇ ಇದ್ದ ಸ್ಟೀಲ್ ಸಾಮಗ್ರಿಗೆ ತಗುಲಿದ್ದು ಸ್ಪೋಟಕ್ಕೆ ಕಾರಣವಾಗಿದೆ ಎಂದು ಕೂಡಗಿ ಎನ್‌ಟಿಪಿಸಿ ಪೊಲೀಸರು ಮಾಹಿತಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.