ಉಗ್ರನಿಗೆ ಶ್ರದ್ಧಾಂಜಲಿ ಕೋರಿದವನಿಗೆ ಬಲೆ

ಬೆಂಗಳೂರು: ಉಗ್ರರ ದಾಳಿಯನ್ನು ಫೇಸ್​ಬುಕ್​ನಲ್ಲಿ ಸಮರ್ಥಿಸಿಕೊಂಡು ಸಂಭ್ರಮಿಸಿದ ಯುವಕನ ವಿರುದ್ಧ ಎಚ್​ಎಎಲ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ನಗರದ ಗಿರೀಶ್ ಭಾರದ್ವಾಜ್ ಎಂಬಾತ ದೂರು ನೀಡಿದ್ದು, ಕಾಶ್ಮೀರ ಮೂಲದ ಆರೋಪಿ ಅಬೀದ್ ಮಲ್ಲಿಕ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್​ಕುಮಾರ್ ಸಿಂಗ್ ತಿಳಿಸಿದ್ದಾರೆ. ಫೇಸ್​ಬುಕ್​ನಲ್ಲಿ ಆತ್ಮಾಹುತಿ ದಾಳಿಯಲ್ಲಿ ಸತ್ತ ಉಗ್ರನಿಗೆ ಶದ್ಧಾಂಜಲಿ ಪೋಸ್ಟ್ ಹಾಕಿದ್ದಲ್ಲದೆ, ಇದು ನಿಜವಾದ ಸರ್ಜಿಕಲ್ ಅಟ್ಯಾಕ್ ಎಂದು ಆರೋಪಿ ಬರೆದುಕೊಂಡಿದ್ದ. ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದಿರುವ ಆರೋಪಿ ಅಬೀದ್ ಮಲ್ಲಿಕ್ ಹೊರಮಾವು ಬಳಿಯ ಸಗೇಶಿಯಸ್ ಇನ್ಪೋ ಸಿಸ್ಟಮ್ಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಗುರುವಾರ ತಡರಾತ್ರಿ ಪೂರ್ವ ವಿಭಾಗದ ಡಿಸಿಪಿ ರಾಹುಲ್​ಕುಮಾರ್, ಕಂಪನಿಗೆ ಭೇಟಿ ನೀಡಿ ಆರೋಪಿ ಕುರಿತು ಬೆಳಗಿನ ಜಾವದ ತನಕ ಮಾಲೀಕನ ವಿಚಾರಣೆ ನಡೆಸಿದ್ದಾರೆ. 2017ರ ಜುಲೈ 7ರಿಂದ ಸೆಪ್ಟೆಂಬರ್ 22ರವರೆಗೆ 2 ತಿಂಗಳಷ್ಟೇ ಕೆಲಸ ಮಾಡಿದ್ದ ಎಂಬುದು ಗೊತ್ತಾಗಿದೆ. ಸದ್ಯ ಕೆಲಸ ಬಿಟ್ಟು ಎಲ್ಲಿಗೆ ಹೋದ, ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲ. 2 ವರ್ಷಗಳಿಂದ ಆತನ ಸುಳಿವಿಲ್ಲ. ಈತನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಒಂದು ವೇಳೆ ಉಗ್ರವಾದ ಅಥವಾ ಅಪರಾಧ ಹಿನ್ನೆಲೆ ಇದ್ದರೆ ಕೇಂದ್ರ ತನಿಖಾ ಸಂಸ್ಥೆಗಳಿಗೂ ಮಾಹಿತಿ ರವಾನಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ವಿವಿಧೆಡೆ ಪ್ರತಿಭಟನೆ

ಬೆಂಗಳೂರು: ಯೋಧರ ಮೇಲೆ ಉಗ್ರರ ಆತ್ಮಹತ್ಯಾ ದಾಳಿ ಖಂಡಿಸಿ ರಾಜ್ಯದ ವಿವಿಧೆಡೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಖಂಡನೆ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದವು. ಅಲ್ಲದೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಸಂಜೆ 7 ಗಂಟೆಗೆ ಮೇಣದ ಬತ್ತಿ ಹೊತ್ತಿಸಿ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಪಕ್ಷದ ಎಲ್ಲ ಘಟಕಗಳಿಗೆ ರಾಜ್ಯ ಬಿಜೆಪಿ ಸೂಚನೆ ನೀಡಿದೆ. ಬಳ್ಳಾರಿ ನಗರದ ತಾಳೂರು ರಸ್ತೆ ನಿವಾಸಿ ತನುಶ್ರೀ, ಫೆ.15ರಂದು ತನ್ನ 10ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಳ್ಳಬೇಕಿತ್ತು. ಆದರೆ, ಅದಕ್ಕೆ ವ್ಯಯವಾಗುತ್ತಿದ್ದ 2,600 ರೂ. ಯೋಧರ ಕಲ್ಯಾಣ ನಿಧಿಗೆ ಡಿಸಿ ಮೂಲಕ ಅರ್ಪಿಸಿದ್ದಾಳೆ. ಮಂಡ್ಯ ಯೋಧನ ಕುಟುಂಬಕ್ಕೆ ವಿಜಯಪುರದ ಆಲಮಟ್ಟಿ ಪಿಎಸ್​ಐ ಸಂಜೀವಪ್ಪ ನಾಯ್ಕೋಡಿ ಸಂಬಳ, ನಿವೃತ್ತಿ ನಂತರವೂ ಮಾಸಿಕ -ಠಿ;500 ನೀಡುವುದಾಗಿ ಘೊಷಿಸಿದ್ದಾರೆ.