ನೀತಿ ಸಂಹಿತೆ ಉಲ್ಲಂಘನೆ: ಸಚಿವ ಪುಟ್ಟರಾಜು, ಮಾದೇಗೌಡರ ವಿರುದ್ಧ ಎಫ್​ಐಆರ್​

ಮಂಡ್ಯ: ಚುನಾವಣೆ ಖರ್ಚಿಗಾಗಿ ಹಣಕ್ಕೆ ಬೇಡಿಕೆ ಇಟ್ಟು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ. ಮಾದೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಚುನಾವಣಾಧಿಕಾರಿ ಜಗದೀಶ್ ದೂರು ಆಧರಿಸಿ ಐಪಿಸಿ ಸೆಕ್ಷನ್ 171(ಇ)ರ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣವನ್ನು ಚುನಾವಣಾ ಆಯೋಗಕ್ಕೆ ವರ್ಗಾಯಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ವ್ಯಕ್ತಪಡಿಸಿರುವ ಜಿ.ಮಾದೇಗೌಡ, ವ್ಯಕ್ತಿಯೊಬ್ಬರ ಮೊಬೈಲ್​ನಿಂದ ಸಚಿವರ ಮೊಬೈಲ್​ಗೆ ಕರೆ ಮಾಡಿಸಿ ಚುನಾವಣೆ ಮಾಡಲು ಹಣ ಕಳಿಸಿಕೊಡುವಂತೆ ಸೂಚಿಸಿದ್ದಾರೆ. ಅದಕ್ಕೆ ಸಚಿವರು ಹಣದ ವ್ಯವಸ್ಥೆ ಮಾಡುವುದಾಗಿ ಉತ್ತರಿಸಿದ್ದಾರೆ. ಈ ಆಡಿಯೋ ವಿಜಯವಾಣಿ, ದಿಗ್ವಿಜಯ ನ್ಯೂಸ್ 24×7 ಗೆ ಲಭ್ಯವಾಗಿತ್ತು. ಆ ನಂತರ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆರ್.ಟಿ.ಐ. ಕಾರ್ಯಕರ್ತ ರವೀಂದ್ರ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದ್ದರು. ಇವರ ದೂರನ್ನು ಆಧರಿಸಿ ಚುನಾವಣಾಧಿಕಾರಿಗಳು ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.

ಜನ ದುಡ್ ಕೇಳ್ತಿದ್ದಾರೆ, ಹಣ ಕಳಿಸಿ ಪ್ಲೀಸ್?!