ಆನಂದ್​ ಸಿಂಗ್​ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್​ ಅಮಾನತು, ಎಫ್​ಐಆರ್​ ದಾಖಲು

ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಕಂಪ್ಲಿ ಶಾಸಕ ಗಣೇಶ್​ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಅದರ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಿ ಕೆಪಿಸಿಸಿ ಆದೇಶ ನೀಡಿದೆ.

ಪೊಲೀಸರು ಐಪಿಸಿ ಸೆಕ್ಷನ್​ 323, 324, 307, 504, 506ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆನಂದ್​ ಸಿಂಗ್​ ಅವರಿಂದ ಘಟನೆಯ ಸಂಪೂರ್ಣ ಮಾಹಿತಿಯನ್ನು ಕೆಪಿಸಿಸಿ ಪಡೆದ ಬಳಿಕ ಜೆ.ಎನ್​.ಗಣೇಶ್​ ಅವರ ಅಮಾನತಿಗೆ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಆದೇಶ ನೀಡಿದ್ದಾರೆ.

ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಲು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ನೇತೃತ್ವದಲ್ಲಿ, ಕೆ.ಜೆ.ಜಾರ್ಜ್​, ಕೃಷ್ಣಭೈರೇಗೌಡರನ್ನೊಳಗೊಂಡ ವಿಶೇಷ ಸಮಿತಿಯನ್ನೂ ಕೆಪಿಸಿಸಿ ರಚಿಸಿದೆ.

ಬಿಡದಿಯ ಈಗಲ್ಟನ್​ ರೆಸಾರ್ಟ್​ನಲ್ಲಿ ಜ.19ರಂದು ರಾತ್ರಿ ಈ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ನಂತರ ಕಂಪ್ಲಿ ಶಾಸಕ ಗಣೇಶ್​ ದೊಣ್ಣೆ ಮತ್ತು ಅಲ್ಲಿಯೇ ಇದ್ದ ಪಾಟ್​ನಿಂದ ಆನಂದ್​ ಸಿಂಗ್​ ಮೇಲೆ ಹಲ್ಲಿ ನಡೆಸಿದ್ದರು. ಅಲ್ಲದೆ, ಅವರ ತಲೆಯನ್ನು ಗೋಡೆಗೆ ಗುದ್ದಿದ್ದರು. ಪಿಸ್ತೂಲ್​ ಕೊಡಿ ಇಲ್ಲಿಯೇ ಮುಗಿಸುತ್ತೇನೆ ಎಂದು ಸಹ ಗಣೇಶ್​ ಕೂಗಾಡಿದ್ದರು ಎನ್ನಲಾಗಿದೆ. ಕೆಳಗೆ ಬಿದ್ದ ಆನಂದ್​ ಸಿಂಗ್​ ಹೊಟ್ಟೆ ಮತ್ತು ಮುಖವನ್ನು ಕಾಲಿನಿಂದ ತುಳಿದಿದ್ದರು. ಶಾಸಕರಾದ ರಾಮಪ್ಪ, ತನ್ವೀರ್​ ಸೇಟ್​, ತುಕಾರಾಮ್, ರಘುಮೂರ್ತಿ ಬಂದು ಆನಂದ್​ಸಿಂಗ್​ ಅವರನ್ನು ರಕ್ಷಿಸಿದ್ದರು ಎನ್ನಲಾಗಿದೆ.

ಆಸ್ಪತ್ರೆಗೆ ದಾಖಲಾಗಿದ್ದ ಆನಂದ್​ಸಿಂಗ್​ ಪೊಲೀಸರಿಗೆ ಹೇಳಿಕೆ ನೀಡಿದ್ದು, ನಾನು ಹಲ್ಲೆ ನಡೆದಾಗ ಪ್ರಜ್ಞಾವಸ್ಥೆ ತಲುಪಿದ್ದೆ. ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. 19ರ ರಾತ್ರಿ ಬರ ನಿರ್ವಹಣೆ , ಲೋಕಸಭಾ ಚುನಾವಣೆ ಚರ್ಚೆ ನಡೆಸುತ್ತಿದ್ದಾಗ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ನನಗೆ ಗಣೇಶ್ ಜೀವ ಬೆದರಿಕೆ ಹಾಕಿದ್ದು ರಕ್ಷಣೆ ಕೊಡಿ ಎಂದು ಆನಂದ್​ ಸಿಂಗ್​ ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಆನಂದ್​ ಸಿಂಗ್​ ಹೇಳಿಕೆ ನೀಡಿದ ಬಳಿಕ ಪೊಲೀಸರು ಗಣೇಶ್​ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಬಿಡದಿ ಠಾಣೆಯಲ್ಲಿ ಗಣೇಶ್​ ವಿರುದ್ಧ ಪ್ರಕರಣ ದಾಖಲಾಗಿದೆ.