ಎಫ್​ಐಆರ್ ಲೋಪಕ್ಕೆ ಅಧಿಕಾರಿಯೇ ಹೊಣೆ

| ಶಿವಕುಮಾರ ಮೆಣಸಿನಕಾಯಿ, ಬೆಂಗಳೂರು

ಸಮಾಜಘಾತಕ ಶಕ್ತಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗದೇ ಬಹುಬೇಗ ಬಿಡುಗಡೆ ಹೊಂದುತ್ತಾರೆ ಎಂಬ ಆರೋಪ ಸಾರ್ವಕಾಲಿಕ. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೇ ಇದನ್ನು ಒಪ್ಪಿ ಎಫ್​ಐಆರ್ ದಾಖಲಾತಿಯ ಪದ್ಧತಿಯಲ್ಲೇ ಆಮೂಲಾಗ್ರ ಬದಲಾವಣೆಗೆ ಮುಂದಾಗಿದೆ.

ಇನ್ಮುಂದೆ ಯಾವುದೇ ಅಪರಾಧದ ಕುರಿತು ಠಾಣಾಧಿಕಾರಿ ಕಾಟಾಚಾರಕ್ಕೆ ಎಫ್​ಐಆರ್ ದಾಖಲಿಸುವಂತಿಲ್ಲ. ಬದಲಾಗಿ ಸಬ್ ಇನ್ಸ್​ಪೆಕ್ಟರ್ ಮಟ್ಟದ ಅಧಿಕಾರಿಯೇ ಸರ್ಕಾರಿ ಅಭಿಯೋಜಕರನ್ನು ಸಂರ್ಪಸಿ, ಅಪರಾಧದ ಸ್ವರೂಪ ಕುರಿತು ರ್ಚಚಿಸಿಯೇ ಎಫ್​ಐಆರ್​ನಲ್ಲಿ ಸೆಕ್ಷನ್ ದಾಖಲಿಸತಕ್ಕದ್ದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಕ್ರಿಮಿನಲ್​ಗಳಿಗೆ ವರದಾನ: ರಾಜ್ಯದಲ್ಲಿ ದಿನೇದಿನೆ ಸಮಾಜಘಾತಕ ಶಕ್ತಿಗಳಿಗೆ ನ್ಯಾಯಾಲಯದಲ್ಲಿ ಮೇಲುಗೈ ಆಗುತ್ತಿದೆ. ಪೊಲೀಸರು ಎಫ್​ಐಆರ್ ದಾಖಲಿಸುವಾಗ ಆಗುತ್ತಿರುವ ಲೋಪ, ಸರ್ಕಾರಿ ವಕೀಲರ ಜತೆ ಸಮನ್ವಯ ಕೊರತೆಯಿಂದ ಶಿಕ್ಷೆ ಪ್ರಮಾಣ ಕುಗ್ಗುತ್ತಿರುವುದರಿಂದ ಕ್ರಿಮಿನಲ್​ಗಳು ವಿಜೃಂಭಿಸುತ್ತಿದ್ದಾರೆ. ಅಲ್ಲದೆ ತನಿಖಾಧಿಕಾರಿಗಳು ಖುದ್ದಾಗಿ ತನಿಖೆ ನಿರ್ವಹಿಸದೆ ಠಾಣಾಧಿಕಾರಿಗಳು, ಠಾಣೆ ಬರಹಗಾರರು ಬರೆಯುವ ತನಿಖೆಯ ಕಾಗದಗಳಿಗೆ ತನಿಖಾಧಿಕಾರಿ ಓದದೆ ಸಹಿ ಹಾಕುವ ಪರಿಪಾಠ ಹೆಚ್ಚಾಗಿದೆ. ಇದರಿಂದಲೇ ಕ್ರಿಮಿನಲ್​ಗಳು ಬಹುಬೇಗ ಜಾಮೀನು ಪಡೆಯುತ್ತಾರೆ ಹಾಗೂ ಬಿಡುಗಡೆ ಹೊಂದುತ್ತಾರೆಂದು ಈ ಬದಲಾವಣೆ ತರಲಾಗುತ್ತಿದೆ.

ಎಫ್​ಐಆರ್ ದಾಖಲಾತಿ ಹೇಗೆ?: ಇನ್ನು ಮುಂದೆ ಎಫ್​ಐಆರ್ ದಾಖಲಿಸಬೇಕಾದಾಗ ಅನುಸರಿಸಬೇಕಾದ ನಿಯಮಗಳನ್ನು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಘೋರ ಹಾಗೂ ಸೂಕ್ಷ್ಮ ಪ್ರಕರಣಗಳನ್ನು ಹೊತ್ತು ನೊಂದವರು ಪೊಲೀಸ್ ಠಾಣೆಗೆ ಬಂದಾಗ ಪೊಲೀಸ್ ಠಾಣಾಧಿಕಾರಿಗಳು ಮೊದಲು ಮೇಲಧಿಕಾರಿಗಳನ್ನು ಹಾಗೂ ಸಂಬಂಧಪಟ್ಟ ಸರ್ಕಾರಿ ಅಭಿಯೋಜಕರನ್ನು ಸಂರ್ಪಸಿ ಪ್ರಕರಣದ ಬಗ್ಗೆ ರ್ಚಚಿಸಿ ದೂರಿನಲ್ಲಿರುವ ಅಂಶಗಳಿಗೆ ಅನುಗುಣವಾಗಿ ಕಲಂ ಹಾಗೂ ಸೆಕ್ಷನ್​ಗಳನ್ನು ಅಳವಡಿಸಿ, ಎಫ್​ಐಆರ್ ದಾಖಲಿಸತಕ್ಕದ್ದು ಎಂದು ನಿಯಮ ಅಳವಡಿಸಲಾಗಿದೆ.

ಪ್ರಕರಣಗಳ ತನಿಖೆ ಹಂತದಲ್ಲಿ ತನಿಖಾಧಿಕಾರಿಗಳು ಪ್ರತಿ ತಿಂಗಳು ಪ್ರಕರಣದ ಕಡತಗಳೊಂದಿಗೆ ಸರ್ಕಾರಿ ಅಭಿಯೋಜಕರನ್ನು ಸಂರ್ಪಸಿ ಅಲ್ಲಿಯವರೆಗೆ ಕೈಗೊಂಡಿರುವ ತನಿಖೆಯ ಬಗ್ಗೆ ರ್ಚಚಿಸಿ, ಸೂಕ್ತ ಮಾರ್ಗದರ್ಶನ ಪಡೆದು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ 15 ದಿನಗಳ ಪೂರ್ವದಲ್ಲಿ ಕಡ್ಡಾಯವಾಗಿ ಸರ್ಕಾರಿ ಅಭಿಯೋಜಕರನ್ನು ಭೇಟಿ ಮಾಡಿ, ದೋಷಾರೋಪಣೆ ಪಟ್ಟಿಯನ್ನು ಪರಿಶೀಲನೆಗೆ ಒಳಪಡಿಸತಕ್ಕದ್ದು.