ಶ್ರದ್ಧಾಂಜಲಿ ಫೋಟೋ ಹಾಕಿದವರಿಗೆ ಪೀಕಲಾಟ

ಬೆಂಗಳೂರು: ಇಹಲೋಕ ತ್ಯಜಿಸಿದವರಿಗೆ ‘ಭಾವಪೂರ್ಣ ಶ್ರದ್ಧಾಂಜಲಿ’ ಸಲ್ಲಿಸುವ ಫಲಕಗಳನ್ನು ಪ್ರದರ್ಶಿಸಿದ ಕುಟುಂಬದವರು ಇದೀಗ ಪೀಕಲಾಟಕ್ಕೆ ಸಿಲುಕಿದ್ದಾರೆ. ಕಾಡುಗುಡಿಯಲ್ಲಿ ಇಂತಹ ಎರಡು ಪ್ರಕರಣ ವರದಿಯಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಸತ್ತವರ ಫೋಟೋ ಒಳಗೊಂಡ ಶ್ರದ್ಧಾಂಜಲಿ ಫಲಕವನ್ನು ಅಳವಡಿಸಿದ ಕುಟುಂಬಸ್ಥರ ವಿರುದ್ಧ ಕಾಡುಗುಡಿ ಪೊಲೀಸರು ಪ್ರತ್ಯೇಕ ಎರಡು ಎಫ್​ಐಆರ್ ದಾಖಲಿಸಿದ್ದಾರೆ.

ಕಾಡುಗುಡಿಯ ಶೀಗೇಹಳ್ಳಿ ಗೇಟ್ ಬಿಎಂಟಿಸಿ ಬಸ್ ನಿಲ್ದಾಣದ ಸಮೀಪದ ವಿದ್ಯುತ್ ಕಂಬಕ್ಕೆ ಮೃತ ಮಂಜುನಾಥ್ ಭಾವಪೂರ್ಣ ಶ್ರದ್ಧಾಂಜಲಿ ಫಲಕವನ್ನು ನೇತು ಹಾಕಲಾಗಿತ್ತು. ಮೇ 22ರ ಬೆಳಗ್ಗೆ 11 ಗಂಟೆಗೆ ಗಸ್ತಿಗೆ ಬಂದ ಎಸ್​ಐ ಆಂಜಿನಪ್ಪ ಫಲಕವನ್ನು ಗಮನಿಸಿ ಸ್ಥಳೀಯ ಪೊಲೀಸ್ ಠಾಣೆ ಮತ್ತು ಪಾಲಿಕೆಯಿಂದ ಅನುಮತಿ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬ ಸದಸ್ಯರು ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದ ನಂತರ ತಪ್ಪಿತಸ್ಥರ ವಿರುದ್ಧ ಸ್ವಯಂ ದೂರು ದಾಖಲಿಸಿ ಶೀಗೇಹಳ್ಳಿ ಚೌಡೇಶ್ವರಿ ದೇವಸ್ಥಾನದ ಬಳಿ ನಿವಾಸಿ ವಿವೇಕ್(24) ಎಂಬುವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿ ಸಮೀಪದಲ್ಲಿ ಮತ್ತೊಂದು ವಿದ್ಯುತ್ ಕಂಬಕ್ಕೆ ಮೃತ ಶಿವಕುಮಾರ್ ಭಾವಪೂರ್ಣ ಶ್ರದ್ಧಾಂಜಲಿ ಎಂದು ಜಾಹೀರಾತು ಫಲಕ ನೇತು ಹಾಕಿದ್ದನ್ನು ಗಂಭೀರವಾಗಿ ಪರಿಗಣಿಸಿದ ಎಸ್​ಐ ಆಂಜಿನಪ್ಪ, ಮೃತರ ಸಂಬಂಧಿಕ ಶೀಗೇಹಳ್ಳಿಯ ಜಯರಾಮ್34) ಎಂಬುವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಇಬ್ಬರನ್ನು ಠಾಣೆಗೆ ಕರೆದು ಹೇಳಿಕೆ ಪಡೆದಿದ್ದಾರೆ. ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಸ್ತೆಗಳಲ್ಲಿ ಜಾಹೀರಾತು ಪ್ರದರ್ಶಿಸುವ ಮುನ್ನ ಸಾರ್ವಜನಿಕರು ಒಮ್ಮೆ ಯೋಚಿಸುವುದು ಒಳಿತು ಎಂಬ ಚರ್ಚೆಗಳು ನಡೆಯುತ್ತಿವೆ.

ಪೇದೆ ಮನೆಗೇ ಕನ್ನ!

ಬೆಂಗಳೂರು: ಕಮಲಾನಗರದಲ್ಲಿ ವಾಸವಿರುವ ಪೇದೆ ಮನೆಯ ಬೀಗ ಮುರಿದ ಕಳ್ಳರು, ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. 2ನೇ ಮುಖ್ಯರಸ್ತೆಯಲ್ಲಿರುವ ಶಂಕರಯ್ಯ ಎಂಬುವರ ಬಾಡಿಗೆಮನೆಯಲ್ಲಿ ಪೇದೆ ಟಿ.ಜಿ. ಮಧುಸೂದನ್ ನೆಲೆಸಿದ್ದು, ಮೇ 21ರ ರಾತ್ರಿ ಕಳ್ಳತನ ನಡೆದಿದೆ.

ಪತ್ನಿ ಮತ್ತು ಮಕ್ಕಳು ಊರಿಗೆ ಹೋಗಿದ್ದರಿಂದ ಮಧುಸೂದನ್ ಒಬ್ಬರೇ ಮನೆಯಲ್ಲಿದ್ದರು. ಮೇ 21ರಂದು ಕೆಲಸ ನಿಮಿತ್ತ ಕುಣಿಗಲ್​ಗೆ ತೆರಳಿದ್ದರು. ಮನೆ ಮಾಲೀಕರು ರಾತ್ರಿ ಪೇದೆಯ ಮೊಬೈಲ್​ಗೆ ಕರೆ ಮಾಡಿ ಮನೆಬಾಗಿಲು ತೆರೆದಿರುವುದನ್ನು ತಿಳಿಸಿದ್ದರು. ಮಧುಸೂದನ್ ಮರುದಿನ ಬೆಳಗ್ಗೆ ಮನೆಗೆ ಬಂದು ನೋಡಿದಾಗ 26 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ರೂ. ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಎಫ್​ಐಆರ್ ದಾಖಲಿಸಿರುವುದಾಗಿ ಬಸವೇಶ್ವರನಗರ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *