ರೈತರ ಮುಖಂಡರ ಮೇಲೆ ಪ್ರಕರಣ ದಾಖಲು

ರಾಣೆಬೆನ್ನೂರ: ತಾಲೂಕಿನ ಮಾಕನೂರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದ ರಾಜ್ಯ ರೈತ ಸಂಘದ ಪ್ರಮುಖರ ಮೇಲೆ ಪ್ರಕರಣ ದಾಖಲಾಗಿದೆ.

ಅನುಮತಿ ಇಲ್ಲದೆ ರೈತ ಮುಖಂಡರು ಹೆದ್ದಾರಿ ತಡೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ತಹಸೀಲ್ದಾರ್ ರಾಮಮೂರ್ತಿ ಕುಮಾರಪಟ್ಟಣ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಎ. ಲಕ್ಷ್ಮೀನಾರಾಯಣ ಗೌಡ, ಜಿಲ್ಲಾಧ್ಯಕ್ಷ ಈರಣ್ಣ ಎನ್. ಹಲಗೇರಿ, ಸುರೇಶ ಮಲ್ಲಾಪುರ, ಮೇಘರಾಜ ಕರಬಸಳ್ಳೇರ ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಬಾರದ ಡಿಸಿ, ರೊಚ್ಚಿಗೆದ್ದ ರೈತರು: ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ಮಧ್ಯಾಹ್ನ 2ರವರೆಗೂ ಮುಂದುವರಿದಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ರೈತರ ಅಹವಾಲುಗಳನ್ನು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಇದ್ದ ನಿಮಿತ್ತ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿರಲಿಲ್ಲ. ನಂತರ ಉಪವಿಭಾಗಾಧಿಕಾರಿ ಅಹವಾಲು ಸ್ವೀಕರಿಸಿದ ನಂತರ ರೈತರು ಪ್ರತಿಭಟನೆ ವಾಪಸ್ ಪಡೆದರು.

ಮೊದಲೇ ಎಚ್ಚರಿಕೆ ನೀಡಿದ್ದ ಇಲಾಖೆ: ಮಾಕನೂರ ಕ್ರಾಸ್ ಬಳಿ ಪ್ರತಿಭಟನೆ ನಡೆಸಲು ರೈತ ಸಂಘಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಅಲ್ಲದೆ, ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ, ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟಾದಲ್ಲಿ ನೀವೇ ಜವಾಬ್ದಾರರು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಅವರಿಗೆ ಗ್ರಾಮೀಣ ಪೊಲೀಸ್ ಠಾಣೆಯಿಂದ ಜು. 11ರಂದು ನೋಟಿಸ್ ನೀಡಲಾಗಿತ್ತು. ಆದರೂ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.