ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಎಫ್‌ಐಆರ್‌

ನವದೆಹಲಿ: ಹಣ ಕೊಟ್ಟಿದ್ದರೂ ದೆಹಲಿಯಲ್ಲಿ ಪ್ರದರ್ಶನ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.

ಸೋನಾಕ್ಷಿ ಸೇರಿ ಇತರೆ ನಾಲ್ವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೋನಾಕ್ಷಿ 37 ಲಕ್ಷ ರೂ. ಪಡೆದಿದ್ದರು. ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಇದರಿಂದ ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿ ನ.24ರಂದೇ ಸೋನಾಕ್ಷಿ ವಿರುದ್ಧ ದೂರು ದಾಖಲಿಸಿದ್ದರು. ಅದರೆ ಈಗ ಪೊಲೀಸರು ಆ ಪ್ರಕರಣದ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಮೊರಾದಾಬಾದ್‌ ಡಿಎಸ್‌ಪಿ ಗಜರಾಜ್‌ ಸಿಂಗ್‌ ಮಾತನಾಡಿ, ನಟಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಐವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸೋನಾಕ್ಷಿ ಸಿನ್ಹಾ, ಅಭಿಷೇಕ್‌ ಸಿನ್ಹಾ, ಮಾಳ್ವಿಕಾ ಪಂಜಾಬಿ, ಧುಮಿಲ್‌ ಠಕ್ಕರ್‌ ಮತ್ತು ಎಡ್ಗರ್ ಅವರ ಹೆಸರು ಎಫ್‌ಐಆರ್‌ನಲ್ಲಿದೆ ಎಂದು ತಿಳಿಸಿದ್ದಾರೆ.

ಸೋನಾಕ್ಷಿ ಅವರು 37 ಲಕ್ಷ ರೂ. ಪಡೆದು ದೆಹಲಿಯಲ್ಲಿ ಸೆ.30ರಂದು ನಡೆಯಲಿದ್ದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಒಪ್ಪಿಕೊಂಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು. ಅವರ ಮನವೊಲಿಸಲು ಬಹಳಷ್ಟು ಪ್ರಯತ್ನಿಸಿದೆ. ತಾವು ಬರದಿದ್ದರೆ ಭಾರಿ ನಷ್ಟವಾಗುವುದಾಗಿ ಹೇಳಿದ್ದೆ. ಆದರೂ ಅವರು ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿದ್ದಾಗಿ ದೂರುದಾರರು ತಿಳಿಸಿದ್ದಾರೆ. (ಏಜೆನ್ಸೀಸ್)