ಚಿತ್ರನಟ ಯಶ್ ತಾಯಿ ಪುಷ್ಪಾ ವಿರುದ್ಧ ಎಫ್​ಐಆರ್

ಬೆಂಗಳೂರು: ಹೈಕೋರ್ಟ್ ಆದೇಶದಂತೆ ಮನೆ ಖಾಲಿ ಮಾಡುವಾಗ ಒಳಾಂಗಣದಲ್ಲಿ ಹಾನಿ ಮಾಡಿದ ಆರೋಪದ ಮೇಲೆ ನಟ ಯಶ್ ತಾಯಿ ಪುಷ್ಪಾ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಮಾಲೀಕ ಡಾ.ವನಜಾ ನೀಡಿದ ದೂರಿನ ಮೇಲೆ ಐಪಿಸಿ ಕಲಂ 427 ಅಡಿ ಯಶ್ ತಾಯಿ ಪುಷ್ಪಾ ಮತ್ತು ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2010ರ ಅ.11ರಂದು ಬನಶಂಕರಿ 3ನೇ ಹಂತದ ಮನೆಯನ್ನು ಪುಷ್ಪಾಗೆ ಬಾಡಿಗೆಗೆ ನೀಡಿದ್ದೆವು. ಬಾಡಿಗೆ ನೀಡದ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆವು. 7 ವರ್ಷ ಅಧೀನ ನ್ಯಾಯಾಲಯ ಮತ್ತು ಹೈಕೋರ್ಟ್​ನಲ್ಲಿ ವಿಚಾರಣೆ ನಡೆದು ಮನೆ ಖಾಲಿ ಮಾಡುವಂತೆ ಪುಷ್ಪಾಗೆ ಆದೇಶ ನೀಡಿತ್ತು. ಆದರೆ, ಮನೆ ಖಾಲಿ ಮಾಡುವಾಗ ಎಲೆಕ್ಟ್ರಿಕಲ್ ಬಲ್ಬ್​ಗಳು, ಅಲಂಕಾರಿಕ ದೀಪಗಳು, ಫ್ಯಾನ್​ಗಳು, ಒಳಗಿನ ಬಾಗಿಲುಗಳು, ಶೆಟರ್, ಪೂಜೆ ಕೊಠಡಿ ಬಾಗಿಲು, ಬಾತ್​ರೂಮ್ ಬಾಗಿಲುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಿದ್ದಾರೆ. ವಾಷ್ ಬೆಸಿನ್ ಮತ್ತು ಕಮೋಡ್​ಗಳನ್ನು ಉದ್ದೇಶಪೂರ್ವಕವಾಗಿ ಒಡೆದು ನಾಶಪಡಿಸಿದ್ದಾರೆ. ಇವೆಲ್ಲದರ ಮೌಲ್ಯ ಅಂದಾಜು 28 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *