ನಾಲ್ವರ ವಿರುದ್ಧ ಎಫ್​ಐಆರ್:ಅಂಬಾಪುರದಲ್ಲಿ 225 ಎಕರೆ ಭೂಮಿ ಗುಳುಂ ಪ್ರಕರಣ

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಬಾಪುರದಲ್ಲಿ 225 ಎಕರೆ ಸರ್ಕಾರಿ ಭೂಮಿ ಕಬಳಿಕೆಗೆ ಭೂಗಳ್ಳರ ಜತೆ ಶಾಮೀಲಾಗಿದ್ದ ನಾಲ್ವರು ಅಧಿಕಾರಿಗಳ ವಿರುದ್ಧ 4 ವರ್ಷದ ನಂತರ ಎಫ್​ಐಆರ್ ದಾಖಲಾಗಿದೆ. 2015ರ ಅ.26ರಂದು ವಿಜಯವಾಣಿ ಸಮಗ್ರ ವರದಿ ಪ್ರಕಟಿಸುವ ಮೂಲಕ ಅಕ್ರಮ ಬಯಲಿಗೆಳೆದಿತ್ತು.

ಸರ್ವೆ ಇಲಾಖೆ ಅಂದಿನ ಉಪನಿರ್ದೇಶಕ ಇ. ಪ್ರಕಾಶ್, ಸಹಾಯಕ ನಿರ್ದೇಶಕ ಆರ್.ರವಿ ಕುಮಾರ್, ಪರ್ಯಾವೇಕ್ಷಕ ಮಹೇಶ್ ಹಾಗೂ ತಾಲೂಕು ಮೋಜಿಣಿದಾರ ಬಸವರಾಜು ವಿರುದ್ಧ ಎಸಿಬಿ ಎಫ್​ಐಆರ್ ದಾಖಲಿಸಿದೆ. 1926ರಲ್ಲಿ ಮೈಸೂರು ಸರ್ಕಾರದ ಅಧಿಸೂಚನೆಯಂತೆ ಈ ಜಾಗವನ್ನು ಮುತ್ತಗದಹಳ್ಳಿ ಮೀಸಲು ಅರಣ್ಯ ಎಂದು ಘೊಷಿಸಲಾಗಿದೆ. 421 ಎಕರೆಯಲ್ಲಿ 300 ಎಕರೆಯನ್ನು ಅರಣ್ಯಕ್ಕೆ ಸೇರಿಸಲಾಗಿತ್ತು. ಇದರಲ್ಲಿ 91 ಎಕರೆಯನ್ನು ‘ಶ್ರೀ ಧರ್ಮವೀರ ಫಾರಂ ಬೆಳ್ಳಾರ’ ತೋಟಗಾರಿಕೆ ಇಲಾಖೆಗೆ 1974ರಲ್ಲಿ ಪರಭಾರೆ ಮಾಡಲಾಗಿತ್ತು. ಇನ್ನುಳಿದ 121 ಎಕರೆ 35 ಗುಂಟೆ ಗೋಮಾಳ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿತ್ತು.

ಅಕ್ರಮ ಬಯಲಾಗಿದ್ದು ಹೇಗೆ?: ಮುತ್ತಗದಹಳ್ಳಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿದ್ದ 121 ಎಕರೆ 35 ಗುಂಟೆ ಗೋಮಾಳ ಜಮೀನನ್ನು 1977ರಲ್ಲಿ ದರಖಾಸ್ತು ಮಂಜೂರಾತಿ ಪ್ರಕರಣದಡಿ 78 ಭೂರಹಿತರು, ಬಡವರು, ದಲಿತರಿಗೆ ನೀಡಲಾಗಿತ್ತು. ಇದರಲ್ಲಿ ಹೆಚ್ಚುವರಿಯಾಗಿ 104 ಎಕರೆ ಮೀಸಲು ಅರಣ್ಯ ಪ್ರದೇಶದ ಜಾಗವನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿತ್ತು. ಈ ಭೂಮಿ ಮೇಲೆ ಭೂಗಳ್ಳರ ಕಣ್ಣು ಬಿತ್ತು. 78 ಮಂದಿ ಜಮೀನನ್ನು ಏಕವ್ಯಕ್ತಿ ಕೋರಿಕೆಯಲ್ಲಿ 2014ರಲ್ಲಿ ದುರಸ್ತಿಪಡಿಸಲು ಆದೇಶ ಕೋರಿ ಭೂದಾಖಲೆಗಳ ಉಪನಿರ್ದೇಶಕರಿಗೆ ತಹಸೀಲ್ದಾರ್ ಕಾಮಾಕ್ಷಮ್ಮ ಕಡತ ಸಲ್ಲಿಸಿದ್ದರು. ಸರ್ವೆಗೆ ನೋಟಿಸ್ ನೀಡಿದಾಗ ಮೂಲ ಮಂಜೂರಿದಾರರ ಪರ ಒಬ್ಬನೇ ವ್ಯಕ್ತಿ ಸ್ವೀಕರಿಸಿದ್ದು, ಭೂಹಗರಣ ಬೆಳಕಿಗೆ ಬರುವಂತೆ ಮಾಡಿತ್ತು.

8 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು!

ಸರ್ಕಾರಿ ಅರಣ್ಯ ಭೂಮಿಯನ್ನು ರುದ್ರೇಶ್ ಎಂಬುವರಿಗೆ ಅಕ್ರಮವಾಗಿ ಪರಭಾರೆ ಮಾಡಿಕೊಡಲು ಸಹಕರಿಸಿದ 8 ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಅಂದಿನ ತಿಪಟೂರು ಎಸಿ ಪ್ರಜ್ಞಾ ಶಿಫಾರಸು ಮಾಡಿದ್ದರು. ಭೂದಾಖಲೆಗಳ ಇಲಾಖೆಯಲ್ಲಿ ತಪ್ಪಿತಸ್ಥರ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಕ್ರಿಮಿನಲ್ ಪ್ರಕರಣವಾದ್ದರಿಂದ ಎಸಿಬಿಯಲ್ಲಿಯೂ ಪ್ರಕರಣ ದಾಖಲಾಗಿದೆ.

ಕಂದಾಯ ಇಲಾಖೆ ಕೋರಿಕೆ ಮೇಲೆ ಭೂ ದಾಖಲೆಗಳ ಇಲಾಖೆ ನಡೆಸಿರುವ ದುರಸ್ತಿ ಯಲ್ಲಿ ಲೋಪವಾಗಿರುವ ಬಗ್ಗೆ ದೂರಿದ್ದು, ಆರೋಪಿತ ಸಿಬ್ಬಂದಿ ವಿರುದ್ಧ ಇಲಾಖೆ ವಿಚಾರಣೆ (ಡಿಇ) ನಡೆಯುತ್ತಿದೆ.

| ಪ್ರಸಾದ್ ಕುಲಕರ್ಣಿ ಉಪನಿರ್ದೇಶಕ, ಭೂದಾಖಲೆಗಳ ಇಲಾಖೆ, ತುಮಕೂರು

ಭೂಮಾಪನ ಇಲಾಖೆ ಕೋರಿಕೆಯಂತೆ ಅಕ್ರಮ ಭೂ ಮಂಜೂರಾತಿಯಲ್ಲಿ ನಡೆದಿರುವ ಲೋಪಗಳ ಬಗ್ಗೆ ನಾಲ್ವರ ವಿರುದ್ಧ ನ್ಯಾಯಾಲಯಕ್ಕೆ ಎಫ್​ಐಆರ್ ಸಲ್ಲಿಸಲಾಗಿದೆ. ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ.

| ಬಿ.ಉಮಾಶಂಕರ್ ಡಿವೈಎಸ್​ಪಿ ಎಸಿಬಿ-ತುಮಕೂರು

Leave a Reply

Your email address will not be published. Required fields are marked *