ಅಕ್ರಮ ಮರಳು ಸಂಗ್ರಹಿಸಿದ್ದಕ್ಕೆ 2 ಕೋಟಿ ರೂ. ದಂಡ ವಿಧಿಸಿದ ರೋಹಿಣಿ ಸಿಂಧೂರಿ

ಹಾಸನ:ಸಕಲೇಶಪುರ ತಾಲೂಕು ಅರೆಕೆರೆ ಬಳಿ ಅಕ್ರಮವಾಗಿ ಮರಳು ದಾಸ್ತಾನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಗುತ್ತಿಗೆ ಸಂಸ್ಥೆಗೆ 2 ಕೋಟಿ ರೂ. ದಂಡ ವಿಧಿಸುವ ಖಡಕ್ ತೀರ್ಮಾನ ಕೈಗೊಂಡಿದ್ದಾರೆ.

ಗುತ್ತಿಗೆ ಸಂಸ್ಥೆಯ ಮಾಲೀಕ ಶರ್ಪುದ್ದೀನ್ ಅವರಿಗೆ ಜ.21ರಂದು ನೋಟಿಸ್ ನೀಡಿರುವ ಜಿಲ್ಲಾಧಿಕಾರಿ, ಅಕ್ರಮವಾಗಿ ಮರಳು ಸಂಗ್ರಹಿಸಿದ ತಪ್ಪಿಗೆ 25 ಲಕ್ಷ ರೂ. ದಂಡ, ಅದೇ ಮರಳನ್ನು ಕಾಮಗಾರಿಗೆ ಬಳಸಲು ಇಚ್ಛಿಸಿದಲ್ಲಿ ಪ್ರತಿ ಕ್ಯೂ.ಮೀ.ಗೆ 1700 ರೂ. ನಂತೆ 82 ಲಕ್ಷ ರೂ. ರಾಜಧನ ಹಾಗೂ ಕೃಷಿ ಭೂಮಿಯಲ್ಲಿ ಮರಳು ದಾಸ್ತಾನು ಮಾಡಿ ಜೀವ ಸಂಕುಲಕ್ಕೆ ಹಾನಿ ಮಾಡಿದ್ದಕ್ಕಾಗಿ 81 ಲಕ್ಷ ರೂ. ದಂಡ ಸೇರಿ ಒಂದು ವಾರದ ಒಳಗಾಗಿ ಒಟ್ಟು 2,00,29000 ರೂ.ಪಾವತಿಸುವಂತೆ ಸೂಚಿಸಿದ್ದಾರೆ.

ಅರೆಕೆರೆಯ ಸೌಭಾಗ್ಯ ಎಂಬವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಸುಮಾರು 9 ಸಾವಿರ ಮೆಟ್ರಿಕ್ ಟನ್ ಮರಳು ದಾಸ್ತಾನು ಮಾಡಿರುವ ಖಚಿತ ಮಾಹಿತಿ ಆಧರಿಸಿ ಜ.10ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಕ್ರಮ ಮರಳನ್ನು ವಶಕ್ಕೆ ಪಡೆಯಲಾಗಿತ್ತು.

ಈ ವೇಳೆ ಸ್ಥಳದಲ್ಲಿದ್ದ ಓಷಿಯನ್ ಕನ್‌ಸ್ಟ್ರಕ್ಷನ್ ಸಂಸ್ಥೆಯ ನೌಕರರೆಂದು ಹೇಳಿಕೊಂಡ ಜಹೀರುದ್ದೀನ್ ಮತ್ತು ಮಹಮದ್ ಇರ್ಫಾನ್ ಎಂಬವರು ಈ ಎಲ್ಲ ದಾಸ್ತಾನು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಡಿ ಮಂಜೂರಾದ ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದರು. ನಂತರ ಅದಕ್ಕೆ ಸಂಬಂಧಿಸಿದ ಪರವಾನಗಿಗಳನ್ನು ಹಾಜರುಪಡಿಸಲು ಸೂಚಿಸಿದಾಗ ನೌಕರರು ಯಾವುದೇ ದಾಖಲಾತಿ ಸಲ್ಲಿಸಿರಲಿಲ್ಲ. ಮರಳು ದಾಸ್ತಾನು ಮಾಡಿರುವ ಪ್ರದೇಶ ಕೃಷಿ ಚಟುವಟಿಕೆಗೆ ಯೋಗ್ಯ ಸ್ಥಳವೆಂದು ಪರಿಶೀಲನೆಯಿಂದ ತಿಳಿದು ಬಂದಿದೆ. ಆದ್ದರಿಂದ ಅಲ್ಲಿ ಮರಳು ಸಂಗ್ರಹಿಸಿದ್ದು ಕಾನೂನು ಉಲ್ಲಂಘನೆಯಾಗಿದೆ ಎಂದು ಜಿಲ್ಲಾಧಿಕಾರಿ ನೋಟಿಸ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕಂದಾಯ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಮರಳು ದಾಸ್ತಾನು ಮಾಡಿದ್ದು ಕಾನೂನು ಬಾಹಿರವಾಗಿದೆ. ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸದಿರುವುದರಿಂದ ಸರ್ಕಾರಕ್ಕೆ ಬರಬೇಕಾಗಿದ್ದ ರಾಜಧನವನ್ನು ವಂಚಿಸಿ ಕಳ್ಳತನದಿಂದ ಗಣಿಗಾರಿಕೆ ನಡೆಸುರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ಕಾನೂನುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಆದ್ದರಿಂದ ಮರಳನ್ನು ಜಪ್ತಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದ ಹಿಟಾಚಿ, ಪವರ್ ಜನರೇಟರನ್ನು ವಶಕ್ಕೆ ಪಡೆದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ಸುಪರ್ದಿಗೆ ನೀಡಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಅಡಕತ್ತರಿಗೆ ಸಿಲುಕಿದ ಗುತ್ತಿಗೆದಾರ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮರಳು ದಾಸ್ತಾನು ಜಪ್ತಿ ಮಾಡಿದಾಗ ತಾವೇ ಅದನ್ನು ದಾಸ್ತಾನು ಮಾಡಿರುವುದಾಗಿ ಓಷಿಯನ್ ಕನ್‌ಸ್ಟ್ರಕ್ಷನ್ ಸಂಸ್ಥೆ ಜಿಲ್ಲಾಡಳಿತಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಅಲ್ಪ ಪ್ರಮಾಣದ ದಂಡ ವಿಧಿಸಿ, ಮರಳು ಬಳಕೆಗೆ ಅವಕಾಶ ನೀಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಗುತ್ತಿಗೆ ಸಂಸ್ಥೆಗೆ ಜಿಲ್ಲಾಧಿಕಾರಿ ನಿರ್ಧಾರ ಆಘಾತಕಾರಿಯಾಗಿದೆ.

ಮರಳು ಸಂಗ್ರಹ ಮಾಡಿದ್ದಕ್ಕೆ ವಿಧಿಸಿರುವ ದಂಡಕ್ಕಿಂತಲೂ ಎರಡು ಪಟ್ಟು ಹೆಚ್ಚು ದಂಡವನ್ನು ಕೃಷಿ ಭೂಮಿಯಲ್ಲಿ ಮರಳು ದಾಸ್ತಾನು ಮಾಡಿದ ತಪ್ಪಿಗಾಗಿ ವಿಧಿಸಿರುವುದು ವಿಶೇಷವಾಗಿದೆ. ಇದರಿಂದ ಗುತ್ತಿಗೆದಾರ 2 ಕೋಟಿ 29 ಸಾವಿರ ರೂ.ನಷ್ಟು ದೊಡ್ಡ ಮೊತ್ತವನ್ನು ಸರ್ಕಾರಕ್ಕೆ ಪಾವತಿಸುವುದು ಅನಿವಾರ್ಯವಾಗಿದೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅರೆಕೆರೆಯಲ್ಲಿದ್ದ ಮರಳನ್ನು ಜಪ್ತಿ ಮಾಡಲು ಆದೇಶಿಸಿದಾಗ ಸರ್ಕಾರದ ಯೋಜನೆಗೆಂದು ಸಂಗ್ರಹಿಸಿದ್ದ ಮರಳನ್ನು ವಶಕ್ಕೆ ಪಡೆದಿದ್ದು ಸರಿಯಲ್ಲ ಎನ್ನುವ ಆಕ್ಷೇಪ ’ಅಧಿಕಾರ ಕೇಂದ್ರದಿಂದ’ ಕೇಳಿ ಬಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು 20 ಲಕ್ಷ ರೂ. ದಂಡ ವಿಧಿಸಿ ಮರಳು ಬಳಕೆಗೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

ಖಡಕ್ ತೀರ್ಮಾನಗಳಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರ ವಿರೋಧ ಕಟ್ಟಿಕೊಂಡಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಈಗಿನ ಸಚಿವರ ಮಾತು ಅಲ್ಲಗಳೆಯುವುದಿಲ್ಲ ಎನ್ನಲಾಗುತ್ತಿತ್ತು.

ಅದರಂತೆ ಮರಳು ಸಂಗ್ರಹ ಮಾಡಿದ್ದಕ್ಕೆ 25 ಲಕ್ಷ ರೂ. ದಂಡ ವಿಧಿಸಿರುವ ಅವರು ಇನ್ನೊಂದೆಡೆ ಮರಳು ಬಳಕೆಗೆ 82 ಲಕ್ಷ ರೂ. ರಾಜಧನ ಪಾವತಿಸುವಂತೆ ಸೂಚಿಸಿದ್ದಾರೆ. ಕೃಷಿ ಭೂಮಿಯಲ್ಲಿ ಮರಳು ದಾಸ್ತಾನು ಮಾಡಿರುವುದಕ್ಕೆ ಕೆಂಡಾಮಂಡಲವಾಗಿರುವ ಅವರು ಅದಕ್ಕಾಗಿ ಪ್ರತ್ಯೇಕ 81 ಲಕ್ಷ ರೂ. ದಂಡ ವಿಧಿಸುವ ದೃಢ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಇದಕ್ಕೆ ಶಿಫಾರಸ್ಸು ಮಾಡಿದ ಕಾರಣ ಮುಂದೊಡ್ಡಿ ಜಿಪಂ ಉಪಾಧ್ಯಕ್ಷರಿಗೂ ನೋಟಿಸ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಶಕ್ತಿಕೇಂದ್ರದ ಕಡೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.