ಬೆಂಗಳೂರು: ಶ್ರೀಲಂಕಾ ಸರಣಿ ಬಾಂಬ್ ಸ್ಪೋಟದ ಉಗ್ರರು ಸಿಲಿಕಾನ್ ಸಿಟಿಗೂ ಬಂದಿರುವ ವದಂತಿ ನಡುವೆ ಸೋಮವಾರ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಕಾಣಿಸಿಕೊಂಡಿದ್ದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಶಂಕಿತ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ವದಂತಿಗಳಿಗೆ ಕಿವಿಕೊಡಬೇಡಿ ಎಂದು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುನಿಲ್ ಕುಮಾರ್ ಅವರು ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ಗೆ ಮೇ 6 ರಂದು ಒಬ್ಬ ವ್ಯಕ್ತಿ ಬಂದಿದ್ದು ನಿಜ. ಆತ ಒಳಗೆ ಬರುವಾಗ ಮೆಟಲ್ ಡಿಟೆಕ್ಟರ್ ನಲ್ಲಿ ಶಬ್ದ ಬಂದಿದೆ. ಈ ವೇಳೆ ಸೆಕ್ಯುರಿಟಿ ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ತನ್ನ ಬಳಿ ಬೆಲ್ಟ್ ಮತ್ತು ಹಣ ಇದೆ ಎಂದು ತಿಳಿಸಿದ್ದ. ಇದೇ ವೇಳೆ ಮತ್ತೊಬ್ಬರನ್ನು ತಪಾಸಣೆ ನಡೆಸುವಾಗ ಆ ವ್ಯಕ್ತಿ ಮೆಟ್ರೋ ಸ್ಟೇಷನ್ ಹೊರಗೆ ಹೋಗಿದ್ದಾನೆ. ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ಆತನ ಬಳಿ ಶಸ್ತ್ರಾಸ್ತ್ರಗಳು ಇದ್ದವು, ಆತ ಮೆಟ್ರೋ ಸ್ಟೇಷನ್ ಸಿಬ್ಬಂದಿ ಮತ್ತು ಸೆಕ್ಯುರಿಟಿಗೆ ಹಣ ನೀಡಿದ್ದಾನೆ. ಆತನ ಬಳಿ ಬ್ಯಾಕ್ಪ್ಯಾಕ್ ಇತ್ತು ಎಂಬುದೆಲ್ಲಾ ಸುಳ್ಳುಗಳು. ವದಂತಿಗಳಿಗೆ ಕಿವಿಕೊಡಬೇಡಿ. ಗಡ್ಡ ಬಿಟ್ಟ ಎಲ್ಲರನ್ನೂ ಉಗ್ರ ಎನ್ನುವುದಕ್ಕೆ ಆಗುವುದಿಲ್ಲ. ಶಂಕಿತ ವ್ಯಕ್ತಿಯನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸುನಿಲ್ ಕುಮಾರ್ ಅವರು ತಿಳಿಸಿದರು.