ನವದೆಹಲಿ: ಕಾರ್ವಿುಕರ ಭವಿಷ್ಯನಿಧಿ (ಇಪಿಎಫ್) ಮತ್ತು ರಾಜ್ಯ ಕಾರ್ವಿುಕರ ಆರೋಗ್ಯ ವಿಮಾ ನಿಗಮದ (ಇಎಸ್ಐಸಿ) ಚಂದಾದಾರರು ಕೋವಿಡ್ನಿಂದ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಯೋಜನೆಯಡಿ ಹೆಚ್ಚುವರಿ ನೆರವನ್ನು ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯ ಭಾನುವಾರ ಪ್ರಕಟಿಸಿದೆ.
ಕೋವಿಡ್ನಿಂದ ಸಾವನ್ನಪ್ಪಿದ ಇಎಸ್ಐಸಿ ಚಂದಾದಾರರ ಕುಟುಂಬಕ್ಕೆ ಪಿಂಚಣಿ ಮತ್ತು ಇಪಿಎಫ್ಒ ಚಾಲಿತ ಗುಂಪು ವಿಮೆ ಪಡೆದವರಿಗೆ ಕಲ್ಪಿಸಲಾದ ಕಾರ್ವಿುಕರ ಠೇವಣಿ ಆಧಾರಿತ ವಿಮಾ ಯೋಜನೆ (ಇಡಿಎಲ್ಐ) ಅಡಿ ಗರಿಷ್ಠ ಪರಿಹಾರ ಮೊತ್ತವನ್ನು 6 ಲಕ್ಷ ರೂ.ನಿಂದ 7 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಇಡಿಎಲ್ಐನ ಕನಿಷ್ಠ ಪರಿಹಾರ ಮೊತ್ತ 2 ಲಕ್ಷ ರೂ. ಆಗಿರುತ್ತದೆ. ಈ ಸೌಕರ್ಯಕ್ಕಾಗಿ ಚಂದಾದಾರರ ಕುಟುಂಬದವರು ಹೆಚ್ಚಿನ ವೆಚ್ಚ ಅಥವಾ ಶುಲ್ಕ ತೆರಬೇಕಾಗಿಲ್ಲ ಎಂದು ಕಾರ್ವಿುಕ ಸಚಿವಾಲಯ ಸ್ಪಷ್ಟಪಡಿಸಿದೆ. ಚಂದಾದಾರರು ಸಾವನ್ನಪ್ಪಿದರೆ ಅಥವಾ ಗಂಭೀರವಾದ ಗಾಯಕ್ಕೆ ಗುರಿಯಾದರೆ ಕಾರ್ವಿುಕ ಪಡೆಯುತ್ತಿದ್ದ ವೇತನದಲ್ಲಿ ಶೇ. 90ರಷ್ಟನ್ನು ಪಿಂಚಣಿಯನ್ನಾಗಿ ಪಡೆಯಬಹುದು. ಈ ಪಿಂಚಣಿ ಕಾರ್ವಿುಕನ ಪತ್ನಿ ಇಲ್ಲವೆ ತಾಯಿಗೆ ಜೀವಮಾನ ಪೂರ್ತಿ ದೊರೆಯುತ್ತದೆ. ಮಗನಿಗಾದರೆ 25 ವರ್ಷ ತುಂಬು ವವರೆಗೆ ಸಿಗುತ್ತದೆ. ಮಗಳಾಗಿದ್ದರೆ ಆಕೆಗೆ ವಿವಾಹ ಆಗುವವರೆಗೆ ದೊರೆಯುತ್ತದೆ. ಇದು 2020 ಮಾರ್ಚ್ 24ರಿಂದ 2 ವರ್ಷ ಚಾಲನೆಯಲ್ಲಿರಲಿದೆ.