More

    ಸಹಕಾರಿ ಬ್ಯಾಂಕ್‌ಗಳಿಂದ ರೈತ, ಮಹಿಳೆಯರಿಗೆ ಆರ್ಥಿಕ ಶಕ್ತಿ

    ಕೋಲಾರ: ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳು ಹಿಂದೆ ಊಹಿಸಿಕೊಳ್ಳಲಾಗದಷ್ಟು ಕೆಟ್ಟ ಪರಿಸ್ಥಿತಿಯಲ್ಲಿತ್ತು, 2014ರಲ್ಲಿ ಅಧಿಕಾರಕ್ಕೆ ಬಂದ ಆಡಳಿತ ಮಂಡಳಿಯ ಶ್ರಮದಿಂದ ಬ್ಯಾಂಕ್‌ಗಳು, ಸೊಸೈಟಿಗಳು ಸುಧಾರಣೆಯಾಗಿ, ರೈತರಿಗೆ, ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಕ್ ಕುಮಾರ್ ಹೇಳಿದರು.

    ನಗರದ ಅರಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ಸಭೆ ಹಾಗೂ ನೂತನ ವಾಣಿಜ್ಯ ಮಳಿಗೆ, ಗೋಧಾಮುಗಳನ್ನು ಉದ್ಘಾಟಿಸಿ ಮಾತನಾಡಿದರು.
    ಹಿಂದೆ ಸಹಕಾರ ಸಂಘಗಳ ಸಭೆಗಳನ್ನು ಜನರನ್ನು ಕರೆ ತರಬೇಕಾಗಿತ್ತು, ಬದಲಾದ ಸಹಕಾರಿ ನಿಯಮಗಳಿಂದಾಗಿ ಪ್ರತಿಯೊಬ್ಬರು ಭಾಗವಹಿಸುವಂತಾಗಿದೆ. ಸಮಸ್ಯೆಗಳು ಇದ್ದಲ್ಲಿ ಮುಕ್ತವಾಗಿ ಚರ್ಚಿಸಲು ಕಲ್ಪಿಸಲಾಗಿರುವ ಅವಕಾಶವೇ ಸರ್ವ ಸದಸ್ಯರ ಸಭೆಯ ಉದ್ದೇಶ ಎಂದರು.
    ಅರಹಳ್ಳಿ ಸಂಘವು ಸಾಲ ಕೊಡಲು ಪಟ್ಟಿಯಲ್ಲಿರಲಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಡಿಸಿಸಿ ಬ್ಯಾಂಕ್ ಸಾಲ ನೀಡಿ ಶಕ್ತಿ ತುಂಬಿದೆ. ಯಾವುದೇ ಹಣ ಕಾಸು ಸಂಸ್ಥೆ ಅಭಿವೃದ್ಧಿಯಾಗಲು ಆಡಳಿತ ಮಂಡಳಿ, ಸಿಬ್ಬಂದಿಯ ಶ್ರಮ ಮುಖ್ಯ, ಸದ್ಯ ಈಗ ಲಾಭದಲ್ಲಿ ಸಾಗುತ್ತಿದ್ದು ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
    ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಅರಹಳ್ಳಿ ಸೊಸೈಟಿಯು ನಗರ ಭಾಗದಲ್ಲಿ ಇರುವುದರಿಂದ ಅಭಿವೃದ್ಧಿ ಹೊಂದಲು ಎಲ್ಲ ರೀತಿಯ ಅವಕಾಶಗಳು ಇವೆ, ಗೋದಾಮು, ಆಹಾರ ಮಳಿಗೆಗಳನ್ನು ಸ್ಥಾಪನೆ ಮಾಡಲು ನಬಾರ್ಡ್, ಡಿಸಿಸಿ ಬ್ಯಾಂಕಿನಿಂದ ಆರ್ಥಿಕ ನೆರವು ನೀಡಲಾಗಿದೆ ಎಂದರು.
    ರೈತರಿಗೆ ಬೆಳೆ ಸಾಲ, ಮಹಿಳಾ ಸ್ವ ಸಹಾಯ ಸಂಘಗಳಿಗೆ ಸೇರಿದಂತೆ ವಿವಿಧ ರೀತಿಯ ಸಾಲವನ್ನು ಗ್ರಾಹಕರಿಗೆ ನೀಡಲಾಗಿದೆ. ಮಾದ್ಯಮಾವಧಿ ಸಾಲ ಪಡೆದುಕೊಳ್ಳಲು ಗ್ರಾಹಕರು ಮುಂದಾಗಬೇಕು. ಬೆಳೆ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಐದು ಲಕ್ಷದ ತನಕ ವಿಸ್ತರಿಸಿದೆ, ಪಡೆದುಕೊಂಡಿರುವ ಸಾಲವನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಂಡು ಪ್ರಮಾಣಿಕವಾಗಿ ಮರು ಪಾವತಿ ಮಾಡಬೇಕು ಎಂದು ತಿಳಿಸಿದರು.
    ಸಹಕಾರಿ ಬ್ಯಾಂಕ್‌ಗಳಿಂದ ರೈತರಿಗೆ, ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಬ್ಯಾಂಕಿಗೆ ಸರ್ಕಾರದಿಂದ ಯಾವುದೇ ರೀತಿ ಅನುದಾನ ಬರುವುದಿಲ್ಲ, ನಬಾರ್ಡ್ ಮತ್ತು ಅಪೇಕ್ಸ್ ಬ್ಯಾಂಕಿನಿಂದ ಬರುವ ಹಣದಿಂದ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
    ಮದ್ಯವರ್ತಿಗಳ ಮಾತುಗಳಿಗೆ ರೈತರು, ಮಹಿಳೆಯರು ಕಿವಿಗೋಡಬಾರದು, ಪಡೆದುಕೊಂಡಿರುವ ಸಾಲವನ್ನು ಪ್ರಮಾಣಿಕವಾಗಿ ಮರುಪಾವತಿ ಮಾಡಬೇಕು. ಪ್ರತಿಯೊಬ್ಬರು ಸಹಕಾರ ಬ್ಯಾಂಕಿನಲ್ಲಿ ಸದಸ್ಯತ್ವ ಪಡೆದುಕೊಂಡು ಸಬಲರಾಗಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ನಷ್ಟದಲ್ಲಿ ಇದ್ದ ಸೊಸೈಟಿ ಲಾಭದತ್ತ ಸಾಗುತ್ತಿದೆ ಎಂದರೆ ಷೇರುದಾರರ, ರೈತರ, ಮಹಿಳೆಯರ ಶಕ್ತಿಯೇ ಕಾರಣ, ಒಂದು ಕಾಲದಲ್ಲಿ ಸಾಲ ಪಡೆದುಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದ ಪರಿಸ್ಥಿತಿಯನ್ನು ಸುಧಾರಿಸಲಾಗಿದೆ ಎಂದು ತಿಳಿಸಿದರು.
    ಸಹಕಾರ ವ್ಯವಸ್ಥೆಯಿರುವುದು ರೈತರನ್ನು ಸಬರನ್ನಾಗಿ ಮಾಡಲು, ಇದರ ಜತೆಗೆ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಸಹಕಾರ ನೀಡಲಾಗುತ್ತಿದೆ. ಯಾವುದೇ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಿಗದಷ್ಟು ಸುಲಭವಾಗಿ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತದೆ. ಸಾಲದ ಜತೆಗೆ ಉಳಿತಾಯ ಹಣವನ್ನು ಹೂಡಿಕೆ ಮಾಡುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
    ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸುಧಾಕರ್, ಸಂಘದ ಅಧ್ಯಕ್ಷ ವೆಂಕಟೇಶಪ್ಪ, ಉಪಾಧ್ಯಕ್ಷ ಪುಸ್ತಿ ನಾರಾಯಣಸ್ವಾಮಿ, ರಂಗನಾಥ್, ಅರುಣೇಶ್ ಬಾಬು, ಅಶೋಕ್ ಕುಮಾರ್, ಕೃಷ್ಣಪ್ಪ, ಎಂ.ನಾರಾಯಣಸ್ವಾಮಿ, ನೀಲಮ್ಮ, ಕಮಲಮ್ಮ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುನಿಸ್ವಾಮಿ, ಸೀನಪ್ಪ, ಕೃಷ್ಣೇಗೌಡ, ಅಶ್ವಥ್, ಸಿಇಒ ಹರೀಶ್, ಗುತ್ತಿಗೆದಾರ ಮಂಜುನಾಥ್ ಮತಿತರರು ಪಾಲ್ಗೊಂಡಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts