More

    ಬಾಕಿ ಹೊರೆ ಹೊತ್ತು ಸುಸ್ತಾಗಿರುವ ಕೆಪಿಸಿಗೆ ಆರ್ಥಿಕ ಮುಗ್ಗಟ್ಟು

    ಬಾಕಿ ಹೊರೆ ಹೊತ್ತು ಸುಸ್ತಾಗಿರುವ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ)ಕ್ಕೆ ಚೈತನ್ಯ ತುಂಬಲು ಆರ್ಥಿಕ ಇಲಾಖೆ ಮುಂದಾಗಿದ್ದು, ಬಾಕಿಯಲ್ಲಿ 8,000 ಕೋಟಿ ರೂ. ಪಾವತಿಸುವಂತೆ ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಿಗೆ ಖಡಕ್ ಸೂಚನೆ ನೀಡಿದೆ.

    ನಿಗಮ ನೌಕರರಿಗೆ ಸಂಬಳ ಕೊಡಲು ಸಾಲ (ಒಒಡಿ) ಎತ್ತಬೇಕಾದ ದುಸ್ಥಿತಿಗೆ ಸಿಲುಕಿದೆ. ಉತ್ಪಾದಿತ ವಿದ್ಯುತ್​ಗೆ

    ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಮುಖ್ಯ ಖರೀದಿ ದಾರರಾಗಿದ್ದು, ಕೊಡಬೇಕಾದ ಬಾಕಿ ಮೊತ್ತ 18,000 ಕೋಟಿ ರೂ. ದಾಟಿದೆ. ವಿವಿಧ ಯೋಜನೆಗೆ ಪಡೆದ ಸಾಲಕ್ಕೆ ಅಸಲು ಮತ್ತು ಬಡ್ಡಿ ಸಹಿತ ಕಂತು ಪಾವತಿ ಹಾಗೂ ಕಾರ್ಯ ಮತ್ತು ಪಾಲನೆ ವೆಚ್ಚ ಸರಿದೂಗಿಸುವುದು ಕಷ್ಟವಾಗುತ್ತದೆ. ಹಂತ ಹಂತವಾಗಿಯಾದರೂ ಬಾಕಿ ಪಾವತಿಗೆ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಕೆಪಿಸಿ ಮೊರೆಯಿಟ್ಟಿದೆ.

    ಉತ್ಪಾದಿಸಿದ ವಿದ್ಯುತ್​ನಲ್ಲಿ ಅಲ್ಪಭಾಗ ಮಾರಾಟಕ್ಕೆ ಅವಕಾಶ ಕೊಡಬೇಕು ಎನ್ನುವುದು ಹಳೆಯ ಪ್ರಸ್ತಾಪ. ನಿಗಮದ ಉನ್ನತಾಧಿ ಕಾರಿಗಳು ಸಂದಭೋಚಿತವಾಗಿ ರವಾನಿಸಿದ ಸಂದೇಶಕ್ಕೆ ಸರ್ಕಾರ ಸ್ಪಂದಿಸಿದ್ದರೆ, ಬೇಡಿಕೆಯಿಲ್ಲವೆಂದು ಶಾಖೋತ್ಪನ್ನ ಮೂಲದ ವಿದ್ಯುತ್ ಸ್ಥಾವರಗಳ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ತಿಂಗಳುಗಟ್ಟಲೇ ಕಡಿತಗೊಳಿಸುವ ಪ್ರಮೇಯ ಇರುತ್ತಿರಲಿಲ್ಲ ಎಂದು ಮೂಲಗಳು ಹೇಳಿವೆ.

    ರಾಜ್ಯದ ದಿನದ ವಿದ್ಯುತ್ ಬೇಡಿಕೆ ಪ್ರಮಾಣ ಜ.11ಕ್ಕೆ ದಾಖಲಾದ ಪ್ರಕಾರ 11,780 ಮೆಗಾ ವಾಟ್​ಗೆ ತಲುಪಿದೆ. ಸೌರ ಮತ್ತು ಪವನ ಮೂಲದ ವಿದ್ಯುತ್ ಸಮೃದ್ಧ, ಅದೂ ಅಗ್ಗ ದರದಲ್ಲಿ ಸಿಗುತ್ತಿರುವ ಕಾರಣ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಅರ್ಧದಷ್ಟು ತಗ್ಗಿಸಿದ್ದು, ಕೆಪಿಸಿಎಲ್ ಲೋಡ್ ಡಿಸ್ಪಾಚಿಂಗ್ ಸೂಚನೆಯಂತೆ ಉತ್ಪಾದನೆ ಏರಿಳಿಕೆಯಾಗುತ್ತದೆ.

    ಕೈಕಟ್ಟಿತು: ಯರಮರಸ್ ಶಾಖೋತ್ಪನ್ನ ವಿದ್ಯುತ್ (ವೈಟಿಪಿಎಸ್) ಕೇಂದ್ರದ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಸಾಲ ಮಾಡಿ 10,000 ಕೋಟಿ ರೂ. ಹೂಡಿ ನಿರ್ವಿುಸಿದ ಈ ಸ್ಥಾವರ ಒಂದು ವರ್ಷದಿಂದ ಸ್ತಬ್ಧವಾಗಿದ್ದು, ವೆಚ್ಚದ ಹೊರೆ ಇಳಿಸಿಕೊಳ್ಳಲೆಂದು ಕಾರ್ಯ ಮತ್ತು ಪಾಲನೆ ಖಾಸಗಿಗೆ ಒಪ್ಪಿಸಲು ಕೆಪಿಸಿ ಯೋಚಿಸಿತ್ತು. ಆದರೆ, ಕಾರ್ವಿುಕರು ಹಾಗೂ ಭೂಮಿ ಕಳೆದುಕೊಂಡ ರೈತರ ತೀವ್ರ ವಿರೋಧ ಕೈಕಟ್ಟಿ ಹಾಕಿದೆ.

    ಶಾಖೋತ್ಪನ್ನ ಸ್ಥಾವರಗಳಿಗೆ ಪ್ರತಿದಿನ ಕಲ್ಲಿದ್ದಲು ಪೂರೈಕೆ ಪ್ರಮಾಣವೂ ಇಳಿದಿದೆ. ಸದ್ಯಕ್ಕೆ ಮೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ 15 ಲಕ್ಷ ಮೆಟ್ರಿಕ್ ಟನ್ ದಾಸ್ತಾನಿದೆ. ವಿದ್ಯುತ್ ಉತ್ಪಾದನೆ ತಗ್ಗಿಸಿರುವ ಕಾರಣ ಪೂರೈಕೆ ಕಡಿತಗೊಳಿಸಲಾಗಿದೆ ಎಂಬುದು ಮೇಲ್ನೋಟದ ಕಾರಣ. ಖರೀದಿಸಿದ ಕಲ್ಲಿದ್ದಲಿಗೆ ಹಣ ಪಾವತಿ ಸಮಸ್ಯೆಯಿದೆ ಎಂದು ಮೂಲಗಳು ಹೇಳಿವೆ.

    ಬಾಕಿ ಪಾವತಿಸಲು ಸೂಚನೆ

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಜ.7ರಂದು ನಡೆದ ಕೆಪಿಸಿ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಹೆಚ್ಚಿದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಪರಾಮರ್ಶೆಯಾಗಿದೆ. ಈ ಸಂದರ್ಭದಲ್ಲಿ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್​ಎನ್ ಪ್ರಸಾದ್ ಗರಂ ಆಗಿಯೇ ಎಸ್ಕಾಂ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ‘ಅವರು(ಕೆಪಿಸಿ) ಕಷ್ಟದಲ್ಲಿದ್ದಾರೆ. ನೀವು(ಎಸ್ಕಾಂ) ಮಾತ್ರ ಎಂಜಾಯ್ ಮಾಡ್ತಾ ಇದ್ದರೆ ಹೇಗೆ? ನಿಗಮ ವಿದ್ಯುತ್ ಉತ್ಪಾದನೆ ನಿಲ್ಲಿಸಿ ಬಾಗಿಲು ಮುಚ್ಚಿದರೆ ಗ್ರಾಹಕರಿಗೆ ವಿದ್ಯುತ್ ಸರಬರಾಜು ಹೇಗೆ ಮಾಡುವಿರಿ? ಯಾವುದೇ ನೆಪ ಹೇಳದೆ ಬಾಕಿಯಲ್ಲಿ 8,000 ಕೋಟಿ ರೂ. ಮಾಸಾಂತ್ಯದೊಳಗೆ ಪಾವತಿಸಿ’ ಎಂಬ ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    | ಮೃತ್ಯುಂಜಯ ಕಪಗಲ್ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts