ಆರ್​ಬಿಐ-ಕೇಂದ್ರ ಸರ್ಕಾರ ಕಿತ್ತಾಟ

ನವದೆಹಲಿ: ಸಿಬಿಐ ಆಂತರಿಕ ತಿಕ್ಕಾಟದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಹಾಗೂ ಕೇಂದ್ರ ಸರ್ಕಾರದ ನಡುವೆ ಶೀತಲ ಸಮರ ಆರಂಭವಾಗಿದೆ.

ಕೇಂದ್ರೀಯ ಬ್ಯಾಂಕ್​ನ ಸ್ವಾಯತ್ತತೆಗೆ ಧಕ್ಕೆ ಮಾಡಬಾರದು ಎಂದು ಕೇಂದ್ರ ಸರ್ಕಾರದ ವಿರುದ್ಧ ಆರ್​ಬಿಐ ಉಪ ಗವರ್ನರ್ ವಿರಳ್ ಆಚಾರ್ಯ ನೀಡಿರುವ ಹೇಳಿಕೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ದೇಶದಲ್ಲಿನ ಬ್ಯಾಂಕ್​ಗಳು 2008-14ರ ಅವಧಿಯಲ್ಲಿ ವಿವೇಚನಾರಹಿತವಾಗಿ ಸಾಲ ನೀಡುತ್ತಿದ್ದಾಗ ಆರ್​ಬಿಐ ಗಮನವನ್ನೇ ಹರಿಸಲಿಲ್ಲ. ಈ ಅವಧಿಯಲ್ಲಿ 58 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಾಲ ನೀಡಲಾಗಿತ್ತು. ಪರಿಣಾಮ ಈಗ ಅನುತ್ಪಾದಕ ಆಸ್ತಿ (ಎನ್​ಪಿಎ) ಮೊತ್ತ ಮಿತಿಮೀರಿದೆ ಎಂದು ಜೇಟ್ಲಿ ಅಸಮಾಧಾನ ಹೊರಹಾಕಿದ್ದಾರೆ.

ವಿರಳ್ ಆಚಾರ್ಯ ಹೇಳಿಕೆಗೆ ಪ್ರಧಾನಿ ಕಾರ್ಯಾಲಯ ಹಾಗೂ ಹಣಕಾಸು ಇಲಾಖೆಯಿಂದಲೂ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿರಳ್, ಕೇಂದ್ರ ಸರ್ಕಾರವು 20-20 ಆಡಲು ಬಯಸುತ್ತದೆ. ಆದರೆ ಆರ್​ಬಿಐ ಟೆಸ್ಟ್ ಪಂದ್ಯವಾಡುತ್ತದೆ. ಬ್ಯಾಂಕ್​ಗಳ ನಿಯಮ ಹಾಗೂ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಆರ್​ಬಿಐನ ಸ್ವಾಯತ್ತೆಗೆ ಧಕ್ಕೆ ತರುವುದು ಆಘಾತಕಾರಿ ವಿಚಾರ. ಇದರಿಂದ ದೇಶದ ಆರ್ಥಿಕತೆಗೆ ಸಮಸ್ಯೆಯಾಗುತ್ತದೆ ಎಂದಿದ್ದರು. ಈ ಹೇಳಿಕೆ ಆಧರಿಸಿ ಆರ್​ಬಿಐ ಸ್ವಾಯತ್ತೆಯನ್ನು ಕೇಂದ್ರ ಸರ್ಕಾರ ಕಸಿಯುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

ಎನ್​ಬಿಎಫ್​ಸಿಗೆ ಹಣ

ಬ್ಯಾಂಕಿಂಗ್ ರಹಿತ ಹಣಕಾಸು ವಲಯಕ್ಕೂ (ಎನ್​ಬಿಎಫ್​ಸಿ) ಸೂಕ್ತ ಪ್ರಮಾಣದಲ್ಲಿ ಹಣ ಪೂರೈಸಲು ಆರ್​ಬಿಐ ಸಮ್ಮತಿಸಿದೆ. ಇದೇ ವಿಚಾರದಲ್ಲಿ ಆರ್​ಬಿಐ ಹಾಗೂ ಕೇಂದ್ರದ ನಡುವೆ ವಾಗ್ವಾದ ನಡೆಯುತ್ತಿತ್ತು. ಮಂಗಳವಾರ ಸಚಿವ ಜೇಟ್ಲಿ ಜತೆಗೆ ಆರ್ಥಿಕ ಸ್ಥಿರತೆ ಕುರಿತು ಸಭೆ ನಡೆಸಿದ ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್ ಬಳಿಕ ಹಣ ಹಂಚಿಕೆಯ ವಿಷಯ ಸ್ಪಷ್ಟಪಡಿಸಿದ್ದಾರೆ.